ಹುಬ್ಬಳ್ಳಿ : ನಮ್ಮ ಸರ್ಕಾರ ಕೊಟ್ಟ ಮಾತಿಗೆ ತಪ್ಪಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ಎಲ್ಲಾ ಗ್ಯಾರಂಟಿ ಸ್ಕೀಮ್‌ಗಳನ್ನು ಅನುಷ್ಠಾನ ಮಾಡುತ್ತೇವೆ. ಕೇಂದ್ರದವರು ಎಷ್ಟೇ ತೊಂದರೆ ಕೊಟ್ಟರೂ ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಬಡ ಜನರ ಅನ್ನದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಿನ್ನಡೆಯಾಗಿದ್ದರಿಂದ ಕಾಂಗ್ರೆಸ್ ಮೇಲಿರುವ ಸೇಡನ್ನು ಬಡ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ನಮಗೆ ಎಷ್ಟೇ ತೊಂದರೆ ಕೊಟ್ಟರೂ ನಾವು ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ. ಶೀಘ್ರದಲ್ಲೇ ಎಲ್ಲರಿಗೂ ಅಕ್ಕಿಯನ್ನು ಕೊಡಲು ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ 17 ಜನ ಉತ್ತರ ಕೊಡಲಿ. ಇದಕ್ಕೆ ಮುನಿರತ್ನ, ಸುಧಾಕರ್, ಎಮ್‌ಟಿಬಿ ನಾಗರಾಜ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್ ಉತ್ತರ ನೀಡಬೇಕು. ಮರಳಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದರು. ನಾವು ಶಿವಾಜಿ, ಸಾವರ್ಕರ್ ವಂಶಸ್ಥರು ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ್, ಅವರು ಯಾರದೇ ವಂಶಸ್ಥರಾಗಿರಲಿ, ನಾವು ಬಸವಣ್ಣನವರ ವಂಶಸ್ಥರೆಂದು ತಿರುಗೇಟು ನೀಡಿದರು.
ವಿದ್ಯುತ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ವಿದ್ಯುತ್ ದರ ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ. ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದೆ. ಕೆಇಆರ್‌ಸಿ ತೆಗೆದುಕೊಂಡ ನಿರ್ಧಾರದಲ್ಲಿ ಕೆಲವು ಲೋಪಗಳಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ… ಸಚಿವ ಸಂತೋಷ್ ಲಾಡ್ : ರಾಜ್ಯದ ಜನತೆಗೆ ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫುಡ್ ಕಾರ್ಪೋರೇಶನ್ ಅವರು 7 ಲಕ್ಷ ಟನ್ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಹಿಂಪಡೆದಿದ್ದಾರೆ. ನಾವು ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು.
ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ನವರನ್ನು ದುಡ್ಡು ಕೊಟ್ಟು ಕೊಂಡುಕೊಂಡು ಸರ್ಕಾರ ರಚನೆ ಮಾಡಿದವರು ಬಿಜೆಪಿಯವರು. ಇದ್ಯಾವ ಶಿಸ್ತಿನ ಪಕ್ಷ ?. ಮಧ್ಯಪ್ರದೇಶ, ಗೋವಾದಲ್ಲಿ ನಮ್ಮ ಸರ್ಕಾರ ಬೀಳಿಸಿ ಅವರು ಸರ್ಕಾರ ರಚನೆ ಮಾಡಿದರು. ಅವರದ್ದು ಶಿಸ್ತಿನ ಪಕ್ಷವಾಗಿದ್ದರೇ ಕಾಂಗ್ರೆಸ್ ನವರನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರು.
Laxmi News 24×7