ಬೆಳಗಾವಿ: ಈ ಹಿಂದೆಯೂ ಸಚಿವನಾಗಿದ್ದಾಗ ಬೆಳಗಾವಿ ನಗರ ಸಾರಿಗೆ ಆರಂಭಿಸಿದ್ದು ಕೂಡ ನಾನೇ. ಬೆಳಗಾವಿ ದೊಡ್ಡ ಜಿಲ್ಲೆ ಆಗಿರುವ ಹಿನ್ನೆಲೆ ಹೆಚ್ಚು ಹೊಸ ಬಸ್‌ಗಳನ್ನು ಬಿಡುವ ಜವಾಬ್ದಾರಿ ನಮ್ಮದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಬೆಳಗಾವಿ ನೂತನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಪರಿಶೀಲಿಸಿ, ಈ ವೇಳೆ ಪ್ರಯಾಣಿಕರನ್ನು ಮಾತನಾಡಿಸಿ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರ ಜೊತೆ ಸಚಿವರು ಮಾತನಾಡಿ, 2016ರಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ನಾನು ಸಚಿವನಾಗಿದ್ದ ವೇಳೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗ ಹೊಸ ಬಸ್ ನಿಲ್ದಾಣ ಪೂರ್ಣಗೊಂಡಿದೆ. ಇನ್ನು ಆರು ತಿಂಗಳಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ಕೂಡ ಪೂರ್ಣಗೊಂಡು ಅದು ಅಲ್ಲಿಗೆ ಸ್ಥಳಾಂತರ ಆಗುತ್ತದೆ. ಗ್ರಾಮೀಣ ಪ್ರದೇಶದ ಬಸ್ ನಿಲ್ಲಲು ಒಳ್ಳೆಯ ವ್ಯವಸ್ಥೆ ಆಗಲಿದೆ ಎಂದು ತಿಳಿಸಿದರು.
ಬೆಳಗಾವಿ ಬಸ್ ನಿಲ್ದಾಣ ಚೆನ್ನಾಗಿದೆ. ನನ್ನ ಸೂಚನೆ ಪ್ರಕಾರ ಮುಂದೆಯೂ ಇದೇ ರೀತಿ ನಿರ್ವಹಣೆ ಮಾಡಿಕೊಂಡು ಹೋಗಬೇಕು. ತಿಂಗಳಿಗೆ ಇಲ್ಲ 15 ದಿನಕ್ಕೆ ಒಂದು ಬಾರಿಯಾದರೂ ಭೇಟಿ ನೀಡುವಂತೆ ಎಂಡಿಗೂ ತಿಳಿಸಿದ್ದೇನೆ. ಇಲ್ಲಿನ ಡಿಸಿಯವರೂ ಕೂಡ ರೆಗ್ಯೂಲರ್ ಆಗಿ ಭೇಟಿ ನೀಡಬೇಕು. ನಮ್ಮ ಸೂಚನೆಗಳನ್ನು ಸರಿಯಾಗಿ ಪಾಲಿಸಿದರೆ ಜನರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದರು.
ಜಿಲ್ಲೆಯ 20 ಗ್ರಾಮಗಳಿಗೆ ಬಸ್ ಸೇವೆ ಇಲ್ಲದಿರುವ ಬಗ್ಗೆ ದೂರು ಕೇಳಿ ಬಂದ ತಕ್ಷಣ ಎಂಡಿ ಭರತ್ ಅವರಿಗೆ ತಿಳಿಸಿದ್ದೆನು. ಈಗ ಅದರಲ್ಲಿ ಎರಡು ಹಳ್ಳಿಗಳಿಗೆ ಬಸ್ ಬಿಡುತ್ತಿದ್ದೇವೆ. ಇನ್ನುಳಿದ 18 ಹಳ್ಳಿಗಳಿಗೆ ಸಮೀಕ್ಷೆ ನಡೆಯುತ್ತಿದೆ. ರಸ್ತೆ ಸಮರ್ಪಕವಾಗಿದ್ದರೆ ಅಲ್ಲಿಯೂ ಬಸ್ ಗಳನ್ನು ಬಿಡುತ್ತೇವೆ ಎಂದ ರಾಮಲಿಂಗಾರೆಡ್ಡಿ ಅವರು, ಹಳೇ ಬಸ್‌ಗಳನ್ನು ಬಿಡುತ್ತಾರೆ ಎಂಬ ಪ್ರಶ್ನೆಗೆ, ನಾಲ್ಕು ನಿಗಮಗಳು ಬೇರೆ ಬೇರೆ, ಒಂದಕ್ಕೊಂದು ಸಂಬಂಧವೇ ಇಲ್ಲ. ಕೆಎಸ್ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ರಾಜ್ಯ ಸಾರಿಗೆ ಸಂಸ್ಥೆಗಳು ಬೇರ ಬೇರೆ ಎಂದು ಸ್ಪಷ್ಟಪಡಿಸಿದರು.
ಎಲೆಕ್ಟ್ರಿಕಲ್ ಬಸ್‌ಗಳನ್ನು ಬಳಸುವಂತೆ ಸಲಹೆ:ಶ್ರೀನಿವಾಸಪೂರ್ತಿ ಅವರ ಅಧ್ಯಕ್ಷತೆಯಲ್ಲಿ ಹಿಂದಿನ ಸರ್ಕಾರವೇ ಏಕಸದನ ಸಮಿತಿ ರಚನೆ ಮಾಡಿತ್ತು. ನಾಲ್ಕು ನಿಗಮಗಳು ನಷ್ಟವಾಗದ ರೀತಿ ಹೇಗೆ ನಡೆಸಬಹುದು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ಅವರು ಕೊಟ್ಟಿದ್ದಾರೆ. ಡಿಸೇಲ್ ಬಸ್ಗಳಿಂದ ಜಾಸ್ತಿ ಖರ್ಚಾಗುತ್ತದೆ. ಎಲೆಕ್ಟ್ರಿಕಲ್ ಬಸ್‌ಗಳನ್ನು ಬಳಸುವಂತೆ ಸಲಹೆ ಕೊಟ್ಟಿದ್ದಾರೆ. ಈಗಿರುವ ಸಿಬ್ಬಂದಿಯಲ್ಲಿ ಯಾರನ್ನೂ ತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಸ್ಪರ ಸೌಜನ್ಯದಿಂದ ವರ್ತಿಸಬೇಕು: ಕಂಡಕ್ಟರ್ ಮೇಲೆ ಹಲ್ಲೆ ಆಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮಲ್ಲಿ 24 ಸಾವಿರ ಬಸ್ ಗಳಿವೆ, ಅದರಲ್ಲಿ ಪ್ರತಿನಿತ್ಯ 23 ಸಾವಿರ ಬಸ್ ಗಳು ಓಡುತ್ತವೆ. ಒಂದು ಸಾವಿರ ಬಸ್ಗಳು ಆರ್ಟಿಓ ಸೇರಿ ಇನ್ನಿತರ ಉದ್ದೇಶಗಳಿಗೆ ಮೀಸಲು ಇಟ್ಟಿರುತ್ತೇವೆ. 1.56 ಸಾವಿರ ಟ್ರಿಪ್ಗಳಿರುತ್ತವೆ, ಇದರಲ್ಲಿ ಯಾವುದೋ ಒಂದು ಟ್ರಪ್ ನಲ್ಲಿ ಹಲ್ಲೆ ಆಗಿರಬಹುದು, ಆಗಿಲ್ಲ ಎಂದು ನಾನು ಹೇಳುತ್ತಿಲ್ಲ ಎಂದರು.
ಬಸ್ ಸಿಬ್ಬಂದಿ ಕೂಡ ಕೆಲವೊಂದು ಸಂದರ್ಭದಲ್ಲಿ ಸಾರ್ವಜನಿಕರ ಜೊತೆಗೆ ಅನುಚಿತವಾಗಿ ವರ್ತಿಸಿರುತ್ತಾರೆ. ಸಾರ್ವಜನಿಕರು ಕೂಡ ತಪ್ಪು ಕಲ್ಪನೆಯಿಂದ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುತ್ತಾರೆ. ಈ ತರಹ ಸಣ್ಣಪುಟ್ಟ ಆಗಿರುತ್ತವೆ. ಹೀಗಾಗಿ ಸಿಬ್ಬಂದಿ ಮತ್ತು ಸಾರ್ವಜನಿಕರು ಪರಸ್ಪರ ಸೌಜನ್ಯದಿಂದ ವರ್ತಿಸಬೇಕು ಎಂದರು.
ಹುಬ್ಬಳ್ಳಿಗೆ ಹೊಸ ಬಿಡುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಬಾರಿ ಹೆಚ್ಚು ಬೆಳಗಾವಿಗೆ ಬಿಡುತ್ತೇವೆ ಎಂದ ಸಚಿವ ರಾಮಲಿಂಗಾರೆಡ್ಡಿ , ಡಿಸೇಲ್ ಇಲ್ಲದೇ ಬಸ್ ಗಳು ಕೆಟ್ಟು ನಿಲ್ಲುತ್ತವೆ ಎಂಬ ಸಿಎಂ ಬೊಮ್ಮಾಯಿ ಟೀಕೆಗೆ ಇದು ರಾಜಕೀಯ ಪ್ರೇರಿತ. ಈ ರೀತಿ ಹೇಳುವುದರಿಂದಲೇ ಅವರನ್ನು ಮನೆಗೆ ಕಳಿಸಿದ್ದಾರೆ ಎಂದು ಪ್ರತ್ಯುತರ ನೀಡಿದರು.
4 ಸಾವಿರ ಬಸ್‌ಗಳ ಖರೀದಿ: ನಾಲ್ಕು ಸಾರಿಗೆ ನಿಗಮಗಳಿಂದ 4 ಸಾವಿರ ಬಸ್‌ಗಳ ಖರೀದಿ ಮಾಡಲಾಗಿದೆ. ನಾನು ಸಚಿವನಾಗುವ ಮುಂಚೆ ಅವುಗಳನ್ನು ಕೊಟ್ಟಿದ್ದಾರೆ. ಈ ಬಾರಿ ಹೆಚ್ಚು ಬಸ್‌ಗಳನ್ನು ಬೆಳಗಾವಿ ಜಿಲ್ಲೆಗೆ ಕೊಡುತ್ತೇವೆ. NWKRTC ಬಸ್‌ಗಳಿಗೆ KSRTC ಬಸ್‌ಗಳ ಹಳೆಯ ಟಯರ್‌ಗಳ ಬಳಕೆ ಮಾಡ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ, ಕೋವಿಡ್ ವೇಳೆ ಎಲ್ಲ ಸಾರಿಗೆ ಸಂಸ್ಥೆಗಳಿಗೆ ನಷ್ಟ ಹೆಚ್ಚಾಯ್ತು. ಈಗ ಎಲ್ಲ ಸುಧಾರಣೆ ಆಗಿದೆ, ಜನ ಓಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಳಗಾವಿ ವಿಭಾಗಕ್ಕೆ ಹೆಚ್ಚು ಹೊಸ ಬಸ್‌ಗಳ ನೀಡಲು ಪ್ರಯತ್ನ ಮಾಡ್ತೀನಿ ಎಂದು ಭರವಸೆ ನೀಡಿದರು.
ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ವಿಚಾರ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ. ಯಾವುದೇ ಗುರುತಿನ ಚೀಟಿ ಇದ್ರೆ ಪ್ರಯಾಣಿಸಬಹುದು. ನಮಗೇನೂ ತೊಂದರೆ ಇಲ್ಲ ಎಂದ ರಾಮಲಿಂಗಾರೆಡ್ಡಿ, ಇನ್ನು ಖಾಲಿ ಹುದ್ದೆಗಳು ಯಾವುದೇ ಇಲಾಖೆಯಲ್ಲಿ ಭರ್ತಿ ಆಗಿಲ್ಲ. ನಮಗೆ ಅಗತ್ಯವಾಗಿ ಬೇಕಿದ್ರೆ ಡೆಪ್ಯುಟೇಶನ್ ಮೇಲಾದರೂ ತಗೋತೀವಿ ಎಂದು ತಿಳಿಸಿದರು.