ಬೆಂಗಳೂರು : ಜಿಎಸ್‌ಟಿ ಕೌನ್ಸಿಲ್‌ಗೆ ರಾಜ್ಯ ಸರ್ಕಾರದ ಪರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2013 ರಿಂದ 2018ರವರೆಗೂ ಕೃಷ್ಣಭೈರೇಗೌಡ ಕೌನ್ಸಿಲ್‌ನ ಸದಸ್ಯರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ಸದಸ್ಯರಾಗಿದ್ದರು.
ಇದೇ ಅನುಭವದ ಆಧಾರದ ಮೇಲೆ ಮತ್ತೊಮ್ಮೆ ಕೃಷ್ಣಭೈರೇಗೌಡರನ್ನೇ ಜಿಎಸ್‌ಟಿ ಕೌನ್ಸಿಲ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಸದಸ್ಯರಾಗಿದ್ದರು. ತೆರಿಗೆ ಸುಧಾರಣಾ ವ್ಯವಸ್ಥೆಗಾಗಿ ಅಖಿಲ ಭಾರತ ಮಟ್ಟದಲ್ಲಿ ರಚಿಸಲಾದ ಈ ಸಮಿತಿಗೆ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಬಿಜೆಪಿ ಸರ್ಕಾರದ ಅಧಿಕಾರವಧಿ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈಗ ಮತ್ತೆ ಕೃಷ್ಣಭೈರೇಗೌಡ ಕೌನ್ಸಿಲ್ ಸದಸ್ಯರಾಗಿದ್ದಾರೆ.
ಸರ್ಕಾರದ ಆದೇಶಗೌಡರಿಗೆ ಸಿಗದ ಜಿಲ್ಲಾ ಉಸ್ತುವಾರಿ ಹೊಣೆ : ಇನ್ನೊಂದೆಡೆ, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿ (ಜೂನ್ 9-2023) ಸರ್ಕಾರ ಆದೇಶ ಹೊರಡಿಸಿತ್ತು. ಸಿಎಂ ಸಿದ್ದರಾಮಯ್ಯ ಯಾವುದೇ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರಲಿಲ್ಲ. ಹಿರಿಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೂ ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿರಲಿಲ್ಲ. ಬಹುತೇಕ ಆಯಾ ಜಿಲ್ಲೆಯ ಸಚಿವರುಗಳನ್ನೇ ತವರು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಬೆಂಗಳೂರು ಮತ್ತು ಬೆಳಗಾವಿ ಸೇರಿದಂತೆ ಒಬ್ಬರಿಗಿಂತ ಹೆಚ್ಚು ಸಚಿವರಿರುವ ಜಿಲ್ಲೆಗಳಲ್ಲಿ ಸಚಿವರನ್ನು ಬೇರೊಂದು ಜಿಲ್ಲೆಗೆ ನೇಮಕ ಮಾಡಲಾಗಿತ್ತು.
ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯದ ಜಿಲ್ಲೆಗಳಿಗೆ ಹೊರ ಜಿಲ್ಲೆಯ ಸಚಿವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪರನ್ನು ಮೈಸೂರು ಜಿಲ್ಲೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರು ನಗರ ಹಾಗೂ ಬೆಂಗಳೂರು ನಗರ ಜಿಲ್ಲೆ, ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ರಾಮನಗರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಇನ್ನುಳಿದಂತೆ ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಮುನಿಯಪ್ಪ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಸ್.ಎಸ್. ಮಲ್ಲಿಕಾರ್ಜುನ್, ಶರಣ್ ಪ್ರಕಾಶ್ ಪಾಟೀಲ್ ಸೇರಿದಂತೆ 31 ಜಿಲ್ಲೆಗೂ ಉಸ್ತುವಾರಿಗಳ ನೇಮಕವಾಗಿದೆ.