ಬೆಳಗಾವಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಜೀವ ಜಲಕ್ಕಾಗಿ ಕುಂದಾನಗರಿ ಜನ ಪರದಾಡುತ್ತಿದ್ದು, ನೀರಿಗಾಗಿ ಟ್ಯಾಂಕರ್ಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಇದೇ ಸ್ಥಿತಿ ಮುಂದುವರಿದರೆ ಮತ್ತಷ್ಟು ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ.
ಇಷ್ಟೊತ್ತಿಗಾಗಲೇ ಮಳೆಗಾಲ ಆರಂಭವಾಗಿ ಜನರ ಮೊಗದಲ್ಲಿ ಮಂದಹಾಸ ಮೂಡಬೇಕಿತ್ತು. ಆದರೆ ಜೂನ್ 10 ದಾಟಿದ್ರೂ ಇನ್ನು ಮಳೆಯ ಸುಳಿವೇ ಸಿಗುತ್ತಿಲ್ಲ. ಇದರಿಂದ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಎಂಟು ದಿನ ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿರುವುದು ಜನರನ್ನು ಚಿಂತೆಗೀಡು ಮಾಡಿದೆ.
ಪಾಲಿಕೆ, ಜಲಮಂಡಳಿ, ಎಲ್ ಆಂಡ್ ಟಿ ಕಂಪನಿಯಿಂದ ಸಮರ್ಪಕ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಜನ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ನಗರದ ಟಿವಿ ಸೆಂಟರ್ ಬಾಕ್ಸೈಟ್ ರೋಡ್ನಲ್ಲಿ ಬರೊಬ್ಬರಿ 26 ಟ್ಯಾಂಕರ್ಗಳಿದ್ದು, ಒಂದೊಂದು ಟ್ಯಾಂಕರ್ ದಿನಕ್ಕೆ 10 ಬಾರಿ ನೀರು ಪೂರೈಕೆ ಮಾಡುತ್ತಿವೆ. ಒಂದು ಟ್ಯಾಂಕರ್ ನೀರಿಗೆ 400 ರೂ. ಮಾಲೀಕರು ನಿಗದಿ ಪಡಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಚಾಲಕ ಶುಭಂ ಬಡೋದೇಕರ್, ಸಹ್ಯಾದ್ರಿ ನಗರ, ಅಜಂ ನಗರ, ಹನುಮಾನಗರ, ಟಿವಿ ಸೆಂಟರ್, ಕುಮಾರಸ್ವಾಮಿ ಲೇಔಟ್ ಸೇರಿ ಮತ್ತಿತರ ಕಡೆಗಳಲ್ಲಿನ ಮನೆ, ಹೋಟೆಲ್, ಹಾಸ್ಟೇಲ್, ಅಪಾರ್ಟಮೆಂಟ್ ಸೇರಿ ಮತ್ತಿತರ ಕಡೆ ನೀರು ಪೂರೈಕೆ ಮಾಡುತ್ತಿದ್ದೇವೆ. ಮಳೆ ಆಗದೇ ಇದ್ದಿದ್ದರಿಂದ ನೀರಿಗೆ ಬಹಳಷ್ಟು ಬೇಡಿಕೆ ಬರುತ್ತಿದೆ. ಬಾವಿಯಲ್ಲೂ ನೀರು ಖಾಲಿಯಾಗಿದೆ. ನಮಗೆ ಎಷ್ಟು ಸಾಧ್ಯವೋ ಅಷ್ಟು ನೀರು ಪೂರೈಸುತ್ತಿದ್ದೇವೆ ಎಂದರು.
ನಗರದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಕುರಿತು ಈಟಿವಿ ಭಾರತ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರನ್ನು ಸಂಪರ್ಕಿಸಿದಾಗ, ಇನ್ನು 20 ದಿನಗಳವರೆಗೆ ಸಮಸ್ಯೆ ಆಗುವುದಿಲ್ಲ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಅಲ್ಲೆಲ್ಲಾ ನೀರು ಪೂರೈಕೆ ಮಾಡಲು ನಮ್ಮಲ್ಲಿ 20 ಟ್ಯಾಂಕರ್ಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ. ಅಲ್ಲದೇ 786 ಬೋರವ್ಹೇಲ್ಗಳ ಮೂಲಕವೂ ನೀರು ಸರಬರಾಜು ಮಾಡಲಾಗುತ್ತಿದೆ. ಹಿಡಕಲ್ ಮತ್ತು ರಾಕಸಕೊಪ್ಪ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದೆ. ಮುಂಗಾರು ಇನ್ನು ಪ್ರವೇಶ ಮಾಡದೇ ಇರುವುದು ಸಮಸ್ಯೆ ತಂದೊಡ್ಡಿದೆ. ಹೀಗಾಗಿ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವಂತೆ ಕೇಳಿಕೊಂಡರು.
ಬೆಳಗಾವಿ ನೀರು ಸರಬರಾಜು ಉಸ್ತುವಾರಿ ಅಧಿಕಾರಿ ರವಿಕುಮಾರ ಮಾತನಾಡಿ, ಬೆಳಗಾವಿ ನಗರಕ್ಕೆ ನೀರು ಪೂರೈಕೆ ಆಗುವುದು ಹಿಡಕಲ್ ಜಲಾಶಯ ಮತ್ತು ರಾಕಸಕೊಪ್ಪ ಜಲಾಶಯಗಳಿಂದ. ಸದ್ಯ ಹಿಡಕಲ್ ಜಲಾಶಯದಲ್ಲಿ 2 ಟಿಎಂಸಿ ನೀರಿದ್ದು, ರಾಕಸಕೊಪ್ಪದಲ್ಲಿ 900 ಎಂ.ಎಲ್.ಡಿ ನೀರಿದೆ. ಹಿಡಕಲ್ ನಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ರಾಕಸಕೊಪ್ಪದಲ್ಲಿ ನೀರು ಖಾಲಿಯಾಗುತ್ತಿದ್ದು, ಜುಲೈ ಮೊದಲ ವಾರದವರೆಗೆ ನೀರಿನ ಸಮಸ್ಯೆ ಆಗುವುದಿಲ್ಲ. ಇದಾದ ಬಳಿಕ ನೀರಿನ ಸಮಸ್ಯೆ ಆಗಬಹುದು ಎಂದಿದ್ದಾರೆ.