ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸ್ಪಂದಿಸಿ ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ ರೂ. 273 ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ ಅತಿ ದೊಡ್ಡ ನಗರವಾಗಿದೆ. ಧಾರವಾಡದಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ (IIIT) ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಂತಹ ಬೃಹತ್ ಸಂಸ್ಥೆಗಳ ಕಾರ್ಯಾರಂಭ ಮಾಡಿವೆ.
ಸಚಿವ ಜ್ಯೋತಿರಾಧಿತ್ಯ ಸಿಂಧಿಯಾರಿಂದ ಪ್ರಸ್ತಾವನೆಗೆ ಒಪ್ಪಿಗೆ: ಹೀಗಾಗಿ ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ಸಂಖ್ಯೆಯ ಹಿನ್ನೆಲೆ ಈಗಿರುವ ಟರ್ಮಿನಲ್ ಕಟ್ಟಡದ ವಿಸ್ತೀರ್ಣ, ಹೆಚ್ಚಳ ರನ್‌ವೇ ವಿಸ್ತೀರ್ಣ, ಆಪಾನ್ ವಿಸ್ತೀರ್ಣ ಹಾಗೂ ಕಾರ್ಗೋ ನಿರ್ವಹಣಾ ಸುಧಾರಣೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಹಿಂದಿನ ತಿಂಗಳು ಪತ್ರ ಬರೆಯಲಾಗಿತ್ತು. ಪತ್ರಕ್ಕೆ ಉತ್ತರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಎಲ್ಲ ಸುಧಾರಣಾ ಕಾರ್ಯದ ಪ್ರಸ್ತಾವನೆ ತೀವ್ರ ಪರಿಶೀಲನೆ ನಡೆಸಿ ಈ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ ಎಂದೂ ಸಚಿವ ಜೋಶಿ ಮಾಹಿತಿ ನೀಡಿದ್ದಾರೆ.
ನೂತನ ಯೋಜನೆಯ ಪ್ರಕಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ 20,000 ಚ.ಮಿ. ವಿಸ್ತರಣೆಗೊಳ್ಳಲಿದ್ದು, ಏಕಕಾಲಕ್ಕೆ 1400 ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ವಿಸ್ತರಣೆ ಕಾಮಗಾರಿ ಜನವರಿಯಲ್ಲಿ ಆರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿಸುವ ಗುರಿ ಹೊಂದಲಾಗಿದೆ ಎಂದೂ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಹಕಾರಿ: ಈ ಬೃಹತ್ ವಿಮಾನ ನಿಲ್ದಾಣದ ಸುಧಾರಣೆಗೆ ಹಾಗೂ ಉನ್ನತೀಕರಣ ಕಾರ್ಯ ಪೂರ್ಣಗೊಂಡಾಗ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗುವುದಲ್ಲದೇ ಅಲ್ಲಿಯವರೆಗೆ ದೇಶದ ಇತರ ಮಹತ್ವದ ನಗರಗಳಿಗೆ ವಿಮಾನಗಳ ಆರಂಭಕ್ಕೂ ಪ್ರಯತ್ನಿಸಲಾಗುವುದೆಂದೂ ಕೂಡಾ ಸಚಿವ ಜೋಶಿ ಹೇಳಿದ್ದಾರೆ. ಈ ಸುಧಾರಣೆಯಿಂದ ಇಡೀ ಉತ್ತರ ಕರ್ನಾಟಕದ ಕೈಗಾರಿಕೆ, ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗೂ ಸಹಕಾರ ಸಿಗಲಿದೆ ಎಂದು ಹೇಳಿದ್ದಾರೆ.
1400 ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯಕ್ಕೆ ಪರಿವರ್ತನೆ: ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ 3600 ಚದರ ಮೀಟರ್ ಗಾತ್ರದ ಟರ್ಮಿನಲ್ ಕಟ್ಟಡ ಈಗ ಹಾಲಿ ಪ್ರತಿ ವರ್ಷ 5 ಲಕ್ಷ ಪ್ರಯಾಣಿಕರ ನಿರ್ವಹಣೆಯ ಒಂದೇ ಸಮಯಕ್ಕೆ 300 ಪ್ರಯಾಣಿಕರಂತೆ ಸಾಮರ್ಥ್ಯ ಹೊಂದಿದೆ.
ಇದರೊಂದಿಗೆ 20 ಸಾವಿರ ಚೌರಸ್ ಮೀಟರ್ ಗಾತ್ರದ 1400 ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯದ 3 ಏರೋಬ್ರಿಜ್ ಸೇರಿದಂತೆ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಪರಿವರ್ತಿಸುವ ಯೋಜನೆ, ಈಗಿನ 2600X45 ಮೀ. ಗಾತ್ರದ ರನ್ ವೇ ಹೆಚ್ಚಳ ಹಾಗೂ ಈಗಿರುವ ಅಪಾನ್ ಗಾತ್ರದ ಹೆಚ್ಚಳ ಸೇರಿದಂತೆ ಸಮಗ್ರವಾಗಿ ನಿಲ್ದಾಣದ ಅಭಿವೃದ್ಧಿ ಮಾಡಲಾಗುವುದೆಂದು ವಿವರಿಸಿದ್ದಾರೆ.
ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಮುಗಿದಾಗ ಹುಬ್ಬಳ್ಳಿ ವಿಮಾನ ನಿಲ್ದಾಣ ಅವಳಿ ನಗರದ ಹೆಮ್ಮೆಯಾಗುವುದರಲ್ಲಿ ಸಂದೇಹವಿಲ್ಲವೆಂದು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸುಧಾರಣಾ ಪ್ರಸ್ತಾವನೆಗೆ ಬೇಗ ಅನುಮತಿ ನೀಡಿ ಬೇಗನೇ ಕಾರ್ಯ ಆರಂಭವಾಗುವಂತೆ ವಿಮಾನ ನಿಲ್ದಾಣ ವಿಸ್ತರಣೆಗೆ ಹಣ ಬಿಡುಗಡೆ ಮಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೂ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಹ ತಿಳಿಸಿದ್ದಾರೆ.