Miss World 2023: ‘ವಿಶ್ವ ಸುಂದರಿ 2023’ರ ಸೌಂದರ್ಯ ಸ್ಪರ್ಧೆಯನ್ನು ಈ ಬಾರಿ ಭಾರತ ಆಯೋಜಿಸಲಿದೆ. ಭಾರತವನ್ನು ಆಯ್ಕೆ ಮಾಡಲು ಕಾರಣವೇನು? ಈ ಹಿಂದೆ ದೇಶದಲ್ಲಿ ಈ ಪ್ರತಿಷ್ಟಿತ ಸ್ಪರ್ಧೆ ನಡೆದಿದ್ದು ಯಾವಾಗ? ಕಂಪ್ಲೀಟ್ ಡಿಟೇಲ್ಸ್.
ಬಹುನಿರೀಕ್ಷಿತ ‘ವಿಶ್ವ ಸುಂದರಿ 2023’ರ ಸೌಂದರ್ಯ ಸ್ಪರ್ಧೆಯನ್ನು (Miss World 2023) ಈ ಬಾರಿ ಭಾರತ ಆಯೋಜಿಸಲಿದೆ.
27 ವರ್ಷಗಳ ಬಳಿಕ ಭಾರತವು 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಲಿದೆ. ಈ ವಿಚಾರವನ್ನು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿಯ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಉಪಸ್ಥಿತಿಯಲ್ಲಿ ಘೋಷಿಸಿದ್ದಾರೆ.
“ಈ ಪ್ರತಿಷ್ಠಿತ ಗೌರವವನ್ನು ಭಾರತಕ್ಕೆ ನೀಡುವ ನಿರ್ಧಾರವು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆಯನ್ನು ಉತ್ತೇಜಿಸುವ ಜೊತೆಗೆ ಮಹಿಳೆಯರ ಸಬಲೀಕರಣವನ್ನು ಗುರುತಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಕಾರಣಕ್ಕಾಗಿ ಭಾರತವನ್ನು ಆತಿಥೇಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗಿದೆ” ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮೊರ್ಲಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿ, “71ನೇ ವಿಶ್ವ ಸುಂದರಿ ಫೈನಲ್ ಸ್ಪರ್ಧೆಗಾಗಿ ಭಾರತವನ್ನು ಘೋಷಿಸಲು ನನಗೆ ಸಂತೋಷವಾಗಿದೆ. 30 ವರ್ಷಗಳ ಹಿಂದೆ ನಾನು ಈ ಅದ್ಭುತ ದೇಶಕ್ಕೆ ಭೇಟಿ ಕೊಟ್ಟಿದ್ದೇನೆ. ಮೊದಲ ಕ್ಷಣದಿಂದ ನಾನು ಭಾರತದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೇನೆ. ನಿಮ್ಮ ವೈವಿಧ್ಯಮಯ ಸಂಸ್ಕೃತಿ, ಸುಂದರ ಸ್ಥಳಗಳನ್ನು ಪ್ರಪಂಚದ ಉಳಿದ ಭಾಗಗಳೊಂದಿಗೆ ಹಂಚಿಕೊಳ್ಳಲು ಇನ್ನೂ ನಾವು ಕಾಯಲು ಸಾಧ್ಯವಿಲ್ಲ” ಎಂದು ಜೂಲಿಯಾ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.