ಚಿಕ್ಕೋಡಿ : ಕೋಮು ಗಲಭೆಗೆ ಕಾರಣವಾದ ಸ್ಟೇಟಸ್ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.
ನಗರ ಈಗ ಶಾಂತ ಸ್ಥಿತಿಗೆ ಬರುವಷ್ಟರಲ್ಲಿಯೇ ಆ ವಿವಾದ ಕರ್ನಾಟಕದ ನೆಲಕ್ಕೂ ಕಾಲಿಟ್ಟಿದೆ. ಸದ್ಯಕ್ಕೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ನಿಪ್ಪಾಣಿ ನಗರದ ಬಾಲಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಸ್ಟೇಟಸ್ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ನಿಪ್ಪಾಣಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಬಾಲಾಪರಾಧಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ತನಿಖೆ ಕೂಡಾ ಆರಂಭಿಸಿದ್ದಾರೆ.
ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿರುವ ನಿಪ್ಪಾಣಿ ನಗರದ 16 ವರೆ ವರ್ಷದ ಬಾಲಕನೊಬ್ಬ ಸ್ಟೇಟಸ್ ಇಡುತ್ತಿದ್ದಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಆತನನ್ನು ಪ್ರಶ್ನಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಇನ್ನೊಂದೆಡೆ, ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಅವರು ನಗರಕ್ಕೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುಬೇಕೆಂದು ಅಲ್ಲಿನ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಹಾಗೂ ಸಮಾಜದ ಸ್ವಾಸ್ತ್ರ್ಯ ಕೆಡಿಸುವಂತಹ ಸ್ಟೇಟಸ್ಗಳನ್ನು ಯಾರು ಕೂಡ ಇಡಬೇಡಿ ಎಂದು ಕರೆ ನೀಡಿದ್ದಾರೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.