ದಾವಣಗೆರೆ: ಜಗಳೂರು ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಜವಾನ ವೃತ್ತಿಯಿಂದ ಜೀವನ ಆರಂಭಿಸಿದವರು.
ಇದೀಗ ಶಾಸಕ ವೃತ್ತಿ ಅಲಂಕರಿಸದ ಬಳಿಕ ತಾವು ಕೆಲಸ ಮಾಡ್ತಿದ್ದ ಕಾಲೇಜಿಗೆ ಆಗಮಿಸಿ, ಕೆಲಕಾಲ ಜವಾನ ವೃತ್ತಿಯನ್ನೇ ನಿಭಾಯಿಸಿ ಖುಷಿ ಪಟ್ಟರು. ಇಲ್ಲಿಯ ಅಮರ ಭಾರತಿ ವಿದ್ಯಾಕೇಂದ್ರದಲ್ಲಿ ದೇವೇಂದ್ರಪ್ಪ ಬದುಕು ಕಟ್ಟಿಕೊಂಡವರು. 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿರುವ ಇವರು ಇಡೀ ಜಗಳೂರು ತಾಲೂಕಿಗೆ ಚಿರಪರಿಚಿತರು.
ಜವಾನ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಚುನಾವಣಾ ಕಣಕ್ಕಿಳಿದ ದೇವೇಂದ್ರಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಛಲಬಿಡದೇ ಜೆಡಿಎಸ್ ತೊರೆದು ಕಾಂಗ್ರೆಸ್ ಕೈ ಹಿಡಿದು ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಹಾಗು ಡಿಕೆಶಿ ಕೃಪಾಕಟಾಕ್ಷದಿಂದ ಟಿಕೆಟ್ ಕೂಡ ದಕ್ಕಿಸಿಕೊಂಡ ಇವರು ಕೇವಲ 800 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಜಗಳೂರು ಶಾಸಕರಾಗಿ ಆಯ್ಕೆಯಾದರೂ ದೇವೇಂದ್ರಪ್ಪ ತನಗೆ 30 ವರ್ಷಗಳಿಂದ ಅನ್ನ ನೀಡಿದ್ದ ಜವಾನ ವೃತ್ತಿಯನ್ನು ನೆನೆದು ಕೆಲಕಾಲ ತಾವು ದುಡಿದ ಕಾಲೇಜಿನಲ್ಲಿ ಸಂಬಳರಹಿತ ಕೆಲಸ ಮಾಡಿದರು.
ಜವಾನನಂತೆ ಕಾಲೇಜಿನಲ್ಲಿ ಕಸಗುಡಿಸಿ ಗಂಟೆ ಬಾರಿಸಿದ ಶಾಸಕ: ತಮ್ಮಹಳೆಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ದೇವೇಂದ್ರಪ್ಪ ಕಸ ಗುಡಿಸಿ, ಗಂಟೆ ಬಾರಿಸುವ ಮೂಲಕ ಜವಾನ ವೃತ್ತಿ ನೆನೆದರು. ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಪ್ರಾಂಶುಪಾಲರ ಕೊಠಡಿ ಸ್ವಚ್ಛಗೊಳಿಸಿದರು. ಕಾರಿಡಾರ್ ಕಸ ಗುಡಿಸಿದರು. ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾಲೇಜಿನ ಪ್ರಾಂಶುಪಾಲರನ್ನು ಚೇರ್ ಮೇಲೆ ಕೂರಿಸಿ ಅವರ ಮುಂದೆಯೇ ಜವಾನ ಕೆಲಸ ಮಾಡಿ ಗಮನ ಸೆಳೆದರು.
“ಜವಾನನಾಗಿದ್ದ ನನ್ನನ್ನು ಕ್ಷೇತ್ರದ ಜನರು ಕೈ ಹಿಡಿದರು. ನಲಂದ ಕಾಲೇಜ್ನಲ್ಲಿ ನಾನು ಪ್ರಿನ್ಸಿಪಾಲ್ ಆಫೀಸ್‌ನ ಕೆಲಸಗಾರನಾಗಿದ್ದೆ. ಬೆಳಿಗ್ಗೆ 9:30 ವರೆಗೆ ಆಫೀಸ್ ಶುಚಿ ಮಾಡಿ, ಪ್ರಾರ್ಥನೆಗೆ ಗಂಟೆ ಬಾರಿಸುತ್ತಿದ್ದೆ. ಇದೀಗ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರಕ್ಕೆ ಆಗಮಿಸಿದ್ದು ತಾನು ಕೆಲಸ ಮಾಡಿದ ಕಾಲೇಜಿನಿಂದಲೇ ಕೆಲಸ ಆರಂಭಿಸುತಿದ್ದೇನೆ. ಸಂಬಳರಹಿತ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಕಾಲೇಜಿ ಸಿಬ್ಬಂದಿಗೆ ಕೇಳಿದ್ದೆ. ಅವರು ನನಗೆ ಅವಕಾಶ ಮಾಡಿಕೊಟ್ಟರು” ಎಂದು ಶಾಸಕ ದೇವೇಂದ್ರಪ್ಪ ಖುಷಿ ಪಟ್ಟರು.
Laxmi News 24×7