ಶಿವಮೊಗ್ಗ: ನಗುನಗುತ್ತಾ ಎಲ್ಲ ಮಕ್ಕಳಂತೆ ಆಡಿ, ಕುಣಿದು ಬೆಳೆಯಬೇಕಿದ್ದ ಮಗು ಇದೀಗ ತಂದೆಯನ್ನು ಬಿಟ್ಟು ಇರದಂತಹ ಸ್ಥಿತಿಗೆ ಬಂದಿದೆ. ಆರ್.ಎಂ.ಪಿ ವೈದ್ಯ ಮಾಡಿದ ನಿರ್ಲಕ್ಷತೆ ಹಾಗೂ ಎಡವಟ್ಟಿನಿಂದ ಬಾಲಕ ತನ್ನ ಎರಡು ಕಣ್ಣನ್ನು ಕಳೆದುಕೊಳ್ಳುವಂತಾಗಿದೆ.
ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ನಿವಾಸಿ ಗಿರೀಶ್ ಅವರ ಪುತ್ರ ಶರತ್ ಹುಟ್ಟಿದಾಗ ಎಲ್ಲರಂತೆ ಕಣ್ಣು ಚೆನ್ನಾಗಿಯೇ ಇತ್ತು. ಎಲ್ಲರ ಜೊತೆ ಆಡಿ ಕುಣಿದು ನಲಿಯುತ್ತಿದ್ದ. ಆದರೆ ಇದೀಗ ತಂದೆಯ ಆಶ್ರಯ ಇದ್ದರೆ ಮಾತ್ರ ಓಡಾಟ. ಇಲ್ಲದಿದ್ದರೆ ಕುಳಿತಲ್ಲಿಯೇ ಕುಳಿತುಕೊಳ್ಳುವಂತಹ ದಯನೀಯ ಸ್ಥಿತಿ ಬಂದಿದೆ.
ಬಾಲಕ ಶರತ್‍ನಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಒಂದು ದಿನ ಏಕಾಏಕಿ ಜ್ವರ ಕಾಣಿಸಿಕೊಂಡಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂದೆ ಗಿರೀಶ್ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಶಿರಾಳಕೊಪ್ಪದ ಕ್ಲಿನಿಕ್‍ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯ ಯಾವ ರೀತಿ ಚಿಕಿತ್ಸೆ ಕೊಟ್ಟನೋ ಏನೋ? ವೈದ್ಯ ಚಿಕಿತ್ಸೆ ಕೊಟ್ಟ ಕೆಲ ಸಮಯದ ನಂತರವೇ ಶರತ್ ಮೈಮೇಲೆ ಬೊಬ್ಬೆ ಬಂದಿದೆ. ನಂತರ ಕಣ್ಣು ಸಹ ಕಾಣದಂತಾಗಿದೆ. ವೈದ್ಯನ ಎಡವಟ್ಟಿಗೆ ಬಾಲಕ ಕಣ್ಣು ಕಳೆದುಕೊಂಡು ಕುರಡನಾಗಿದ್ದಾನೆ. ಕಣ್ಣು ಕಾಣಿಸದೇ ಇದ್ದಾಗ ಈತನ ತಂದೆ ಶಿವಮೊಗ್ಗದ ಇತರೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಸಹ ಚಿಕಿತ್ಸೆ ಫಲಕೊಟ್ಟಿಲ್ಲ.
ಮೊದಲೇ ಕೂಲಿ ಮಾಡಿಕೊಂಡು ಬದುಕುತ್ತಿದ್ದ ಗಿರೀಶ್‍ನಿಗೆ ವೈದ್ಯನ ಎಡವಟ್ಟಿನಿಂದ ಮಗನ ಎರಡು ಕಣ್ಣು ಹೋಗಿರುವುದು ಗರ ಬಡಿದಂತಾಗಿದೆ. ಮಗನಿಗೆ ಚಿಕಿತ್ಸೆ ಕೊಡಿಸಲು ಇದ್ದ ಎರಡು ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ನಂತರ ಇದು ಸಾಲದ್ದಕ್ಕೆ ಜೀವನಕ್ಕೆ ಆಧಾರವಾಗಿದ್ದ ಎರಡು ಹಸುಗಳನ್ನು ಸಹ ಮಾರಾಟ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನಿಗೆ ಕಣ್ಣು ಕೊಡಿಸಲು ತಂದೆ ಗಿರೀಶ್ ಅಲೆದಾಡಿದ ಊರಿಲ್ಲ, ನಗರಗಳಿಲ್ಲ. ಆದರೆ ಎಡವಟ್ಟು ಮಾಡಿದ ವೈದ್ಯ ಮಾತ್ರ ಆರಂಭದಲ್ಲಿ ಯಾರಿಗೂ ಗೊತ್ತಾಗದಿರಲಿ ಎಂಬ ಕಾರಣದಿಂದ ಚಿಕಿತ್ಸೆಗೆ ಸ್ವಲ್ಪ ಹಣದ ಸಹಾಯ ಮಾಡಿ ನಂತರ ಸುಮ್ಮನಾಗಿ ಬಿಟ್ಟಿದ್ದಾನೆ.
ಶರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ ಆರ್.ಎಂ.ಪಿ ವೈದ್ಯನ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ. ಎಫ್‍ಐಆರ್ ದಾಖಲಾಗಿ 8 ತಿಂಗಳು ಕಳೆದಿವೆ. ಆದರೆ ಪೊಲೀಸರು ಮಾತ್ರ ಇನ್ನೂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಚಾರ್ಜ್ ಶೀಟ್ ಹಾಕಲು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಯಾವ ಕಾಣದ ಶಕ್ತಿ ತಡೆಯುತ್ತಿವೆಯೋ ಗೊತ್ತಿಲ್ಲ.