ಪತಿ ಮತ್ತು ಪತ್ನಿ ಹಾಗೂ ಐದು ವರ್ಷದ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ.
ಮೃತರು ಮೋಹನ್ ಪ್ರತಾಪ್ ಸಿಂಗ್ ದಂಗರ್ (30), ಪತ್ನಿ ಪೂಜಾ ದಂಗರ್ (25) ಮತ್ತು ಇವರ ಐದು ವರ್ಷದ ಪುತ್ರಿ ಎಂದು ವರದಿಯಿಂದ ತಿಳಿದು ಬಂದಿದೆ. ಕೃಷಿ ಮಾಡುತ್ತಿದ್ದ ಮೋಹನ್ ತಮ್ಮ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ದಂಪತಿ ಮೊದಲಿಗೆ ತಮ್ಮ ಮಗಳನ್ನು ಕೊಂದು ನಂತರ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಸತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ವಾಲ್ಡಗಾಂವ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಗುರುವಾರ ಮೂವರು ಊಟ ಮಾಡಿ ಮಲಗಿದ್ದರು. ಪೂಜಾ ಅವರ ಸೋದರ ಸಂಬಂಧಿ ಇವರ ಮನೆತ ಸಮೀಪದಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ಬೆಳಗ್ಗೆ ಮಗಳು ಅವರ ಮನೆಗೆ ಹೋಗುತ್ತಿದ್ದಳು. ಆದರೆ, ಶುಕ್ರವಾರ ಬೆಳಗ್ಗೆ ಬಾಲಕಿ ಬಾರದೇ ಇದ್ದಾಗ ಸಂಬಂಧಿಕರು ಪೂಜಾ ಮನೆಗೆ ಬಂದಿದ್ದರು. ಈ ವೇಳೆ ಮೂವರು ಸಹ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸತಾರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಸದ್ಯಕ್ಕೆ ಮೋಹನ್ ಮತ್ತು ಪೂಜಾ ದಂಪತಿಯು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುವುದು ಗೊತ್ತಾಗಿಲ್ಲ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.