Breaking News

ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿವಾದ: ಪ್ರಧಾನಿಯೇ ಸರ್ಕಾರದ ಮುಖ್ಯಸ್ಥರು- ಬಿಜೆಪಿ ಸಮರ್ಥನೆ

Spread the love

ನವಹೆದಲಿ: ನೂತನ ಸಂಸತ್ ಭವನ ಉದ್ಘಾಟನೆಯ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವಿನ ಜಟಾಪಟಿ ತಾರಕಕ್ಕೇರಿದೆ.

ಪ್ರಧಾನಿ ಮೋದಿ ಅವರು ಮೇ 28 ರಂದು ವಿ.ಡಿ.ಸಾವರ್ಕರ್ ಅವರ ಜನ್ಮದಿನದಂದು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಭವ್ಯ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸದೆಯೇ ಮೋದಿ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವ ಕೇಂದ್ರ ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂಸತ್ ಭವನವನ್ನು ಸಂವಿಧಾನದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಉದ್ಘಾಟಿಸಬೇಕಿತ್ತು. ಆದರೆ ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

ಬಿಜೆಪಿ ನಾಯಕರಿಂದ ತಿರುಗೇಟು: “ಅಸ್ತಿತ್ವದಲ್ಲಿಯೇ ಇಲ್ಲದ ವಿಷಯಗಳ ಬಗ್ಗೆ ವಿವಾದ ಸೃಷ್ಟಿಸುವ ಹವ್ಯಾಸವನ್ನು ಕಾಂಗ್ರೆಸ್ ಹೊಂದಿದೆ. ರಾಷ್ಟ್ರಪತಿ ದೇಶದ ಮುಖ್ಯಸ್ಥರಾದರೆ, ಪ್ರಧಾನಿ ಸರ್ಕಾರದ ಮುಖ್ಯಸ್ಥರು. ಅವರು ಸರ್ಕಾರದ ಪರವಾಗಿ ಸಂಸತ್ ಮುನ್ನಡೆಸುತ್ತಾರೆ. ಅವರ ನೀತಿಗಳು ಕಾನೂನುಗಳ ಅಡಿಯಲ್ಲಿ ರೂಪುಗೊಂಡಿವೆ. ರಾಷ್ಟ್ರಪತಿ ಯಾವುದೇ ಸದನದ (ಲೋಕಸಭೆ/ರಾಜ್ಯಸಭೆ) ಸದಸ್ಯರಲ್ಲ” ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

 

 

“ಚಾರಿತ್ರಿಕ ಘಟನೆಗೆ ದೇಶ ಸಾಕ್ಷಿಯಾಗುವ ಸಂದರ್ಭದಲ್ಲಿ ತಗಾದೆ ತೆಗೆಯುವ ಮೂಲಕ ಕಾಂಗ್ರೆಸ್‌ ನಾಯಕರು ಅಪಶಕುನದ ಮಾತನಾಡುತ್ತಿದ್ದಾರೆ. ನೂತನ ಸಂಸತ್‌ ಭವನದ ಉದ್ಘಾಟನೆಗೂ ವೀರ್ ಸಾವರ್ಕರ್‌ ಜನ್ಮದಿನದ ವಿಚಾರಕ್ಕೂ ತಳುಕು ಹಾಕುವುದು ಅಸಂಬದ್ಧ. ವೀರ್ ಸಾವರ್ಕರ್ ಅವರು ಪ್ರತಿ ಭಾರತೀಯನ ಹೆಮ್ಮೆ. ಉದ್ಘಾಟನೆ ದಿನಾಂಕವನ್ನು ಪ್ರಶ್ನಿಸುತ್ತಿರುವವರಿಗೆ ಇದು ಕ್ಷುಲ್ಲಕ ಎಂದು ಹೇಳಿ. ಈ ಟೀಕೆ ಮಾಡುತ್ತಿರುವವರು ಸಾವರ್ಕರ್ ಪಾದಕ್ಕೂ ಸಮನರಲ್ಲ” ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವಿಪಕ್ಷಗಳ ವಾದವೇನು?: ಮೇ 28 ರಂದು ನೂತನ ಸಂಸತ್‌ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿಯನ್ನು ಕರೆಯದೆ ಅವಮಾನಿಸಲಾಗಿದೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೂ ಸರ್ಕಾರ ಆಹ್ವಾನ ನೀಡದೇ ದಲಿತರು, ಗಿರಿಜನರನ್ನು ಚುನಾವಣೆ ಸಂದರ್ಭದಲ್ಲಿ ಮತಬ್ಯಾಂಕ್‌ ರೀತಿ ಬಳಸಿಕೊಂಡು ಬಿಸಾಕಿದೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, ”ಸಂಸತ್‌ ಈ ದೇಶದ ಸರ್ವೋಚ್ಚ ಶಾಸನಸಭೆ. ರಾಷ್ಟ್ರಪತಿ ಸರ್ಕಾರ, ಪ್ರತಿಪಕ್ಷಗಳು ಹಾಗೂ ಜನರ ಪ್ರತಿನಿಧಿ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಸಂವಿಧಾನಕ್ಕೆ ಅವಮಾನಿಸಲಾಗಿದೆ” ಎಂದು ದೂರಿದ್ದಾರೆ.

 

 

ಶಂಕುಸ್ಥಾಪನೆಗೂ ಆಹ್ವಾನವಿರಲಿಲ್ಲ: ಚುನಾವಣೆ ಬಂದಾಗ ಮೋದಿಗೆ ದಲಿತರು, ಗಿರಿ ಜನರು ನೆನಪಾಗುತ್ತಾರೆ. ಅವರನ್ನು ಮುನ್ನೆಲೆಗೆ ತಂದು ಮತ ಪಡೆಯುತ್ತಾರೆ. ಬಳಿಕ ಅವರಿಗೆ ಅವಮಾನ ಮಾಡುತ್ತಾರೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ನೂತನ ಸಂಸತ್‌ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕೂಡ ಆಹ್ವಾನಿಸದೆ ಅವಮಾನಿಸಿತ್ತು ಎಂದು ಖರ್ಗೆ ಹೇಳಿದ್ದಾರೆ.

“ದೇಶದ ಸಾಂವಿಧಾನಿಕ ಸ್ವತ್ತಾಗಿರುವ ಸಂಸತ್‌ ಭವನವನ್ನು ರಾಷ್ಟ್ರಪತಿ ಅವರೇ ಉದ್ಘಾಟಿಸಬೇಕು. ಸರ್ಕಾರಕ್ಕೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದರೆ ದ್ರೌಪದಿ ಮುರ್ಮು ಅವರಿಂದಲೇ ಲೋಕಾರ್ಪಣೆ ಮಾಡಿಸಲಿ” ಎಂದು ಆಗ್ರಹಿಸಿದ್ದಾರೆ.

ಭಾನುವಾರ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ”ಹೊಸ ಸಂಸತ್‌ ಭವವನನ್ನು ಪ್ರಧಾನಿ ಮೋದಿ ಬದಲಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡುವುದು ಉತ್ತಮ” ಎಂದು ಹೇಳಿದ್ದರು.

 

“ಹೊಸ ಸಂಸತ್​ ಭವನದ ಉದ್ಘಾಟನೆಯನ್ನು ಪ್ರಧಾನಿ ಬದಲಿಗೆ ಲೋಕಸಭೆ ಸ್ಪೀಕರ್‌ ಅಥವಾ ರಾಜ್ಯಸಭಾ ಸಭಾಪತಿ ಉದ್ಘಾಟನೆ ಮಾಡಲಿ” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಸಲಹೆ ನೀಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟಿಎಂಸಿ ಪಕ್ಷ ವೀರ್ ಸಾವರ್ಕರ್‌ ಜನ್ಮದಿನದಂದೇ ಹೊಸ ಸಂಸತ್‌ ಭವನದ ಲೋಕಾರ್ಪಣೆ ಮಾಡುವುದರ ಔಚಿತ್ಯವೇನು” ಎಂದು ಪ್ರಶ್ನಿಸಿದೆ.

“ಸಾವರ್ಕರ್‌ ಜನ್ಮದಿನದಂದೇ ಉದ್ಘಾಟನೆ ಮಾಡುವ ಮೂಲಕ ದೇಶಕ್ಕಾಗಿ ಹೋರಾಟ ಮಾಡಿದ ಗಾಂಧಿ, ನೆಹರು, ಪಟೇಲ್‌, ಬೋಸ್‌ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೂ ಅವಮಾನಿಸಲಾಗುತ್ತಿದೆ” ಎಂದು ಕಾಂಗ್ರೆಸ್‌ ವಕ್ತಾರ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ

Spread the love ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ ಉಗರಗೋಳ, ಚಿಕ್ಕುಂಬಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸವದತ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ