ಮೈಸೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ವಿಚಾರ ಬಹುತೇಕ ಕೊನೆಗೊಂಡಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಖಚಿತಗೊಳ್ಳುತ್ತಿದ್ದಂತೆ ಹುಟ್ಟೂರು ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಅಧಿಕೃತ ಘೋಷಣೆಗೂ ಮುನ್ನ ಸಿದ್ದರಾಮಯ್ಯನವರ ಫ್ಲೆಕ್ಸ್ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಇತ್ತ ಮೈಸೂರಿನ ಟಿ ಕೆ.ಲೇಔಟ್ನಲ್ಲಿರುವ ಸಿದ್ದರಾಮಯ್ಯನವರ ಮನೆಗೆ ಅಭಿಮಾನಿಗಳ ದಂಡೇ ಆಗಮಿಸಿದ್ದು, ಮನೆಯ ಸುತ್ತ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಸಂಭ್ರಮಾಚರಣೆ ಮಾಡಿದರು.
ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿಯ ಹಸರನ್ನು ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದೆ. ಈ ಮೂಲಕ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟಕ್ಕೆ ತೆರೆ ಎಳೆಯಲಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲುವ ಮೂಲಕ ಜಯಭೇರಿ ಬಾರಿಸಿತ್ತು. ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ ಮುಖ್ಯಮಂತ್ರಿ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಒಂದು ಬಣ ಸಿದ್ದರಾಮಯ್ಯನವರೇ ಆಗಬೇಕು ಎಂದು ಪಟ್ಟು ಹಿಡಿದಿದ್ದರೆ, ಮತ್ತೊಂದು ಬಣ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿತ್ತು. ಸದ್ಯ ಹೊಸ ಮುಖ್ಯಮಂತ್ರಿ ಆಯ್ಕೆ ಕೊನೆಗೊಂಡಿದೆ.
:ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಹುತೇಕ ಖಚಿತ.. ಅಭಿಮಾನಿಗಳು, ಬೆಂಬಲಿಗರಿಂದ ಸಂಭ್ರಮಾಚರಣೆ