Breaking News

ಸೋಲು-ಗೆಲುವಿಗೆ ಒಂದೊಂದು ಮತವೂ ನಿರ್ಣಾಯಕ

Spread the love

ಬೆಂಗಳೂರು: ಕೇವಲ ಒಂದು ಓಟಿನಿಂದ ಒಬ್ಬರು ಗೆದ್ದು, ಇನ್ನೊಬ್ಬರು ಸೋತಿರುವ ರೋಚಕ ಇತಿಹಾಸ ರಾಜ್ಯ ಹಾಗೂ ದೇಶದಲ್ಲಿದೆ. ಕೇವಲ ಒಂದು ಮತದಿಂದ ಸೋತವರು, ಅತಿ ಕಡಿಮೆ ಅಂತರದಿಂದ ಗೆದ್ದವರ ಕಥೆ ಮತ್ತು ವ್ಯಥೆಗೆ ಸುದೀರ್ಘ‌ ಇತಿಹಾಸವಿದೆ.

ಪ್ರಜಾಪ್ರಭುತ್ವ ಎಂಬ ಭವ್ಯ ಬಂಗಲೆಗೆ ಮತಗಳೇ ಅಡಿಪಾಯ. ಕಟ್ಟಡ ಗಟ್ಟಿಯಾಗಿರಲು ಒಂದೊಂದು ಇಟ್ಟಿಗೆಯೂ ಮುಖ್ಯ. ಅದರಂತೆ ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಒಂದೊಂದು ಮತವೂ ನಿರ್ಣಾಯಕವಾಗುತ್ತದೆ. ಜನತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ಮೌಲ್ಯವಿದೆ. ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುವುದು ಕೂಡ ಈ ಮತಗಳೇ. ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ ಅಚ್ಚರಿ ಮತ್ತು ಆಘಾತದ ಫ‌ಲಿತಾಂಶ ನೀಡುವ ಶಕ್ತಿ ಇರುವುದು ಈ ಮತಗಳಿಗೆ.

ಒಂದು ಮತದ ಮಹತ್ವ ರಾಜ್ಯದಲ್ಲಿ ಮೊದಲ ಬಾರಿಗೆ ಅನುಭವಕ್ಕೆ ಬಂದದ್ದು 2004ರಲ್ಲಿ. ಆಗ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌. ಧ್ರುವನಾರಾಯಣ ಒಂದು ಮತ(40,752)ದಿಂದ ಗೆದ್ದು ರಾಜ್ಯದ ಚುನಾವಣ ಇತಿಹಾಸದಲ್ಲೇ ದಾಖಲೆ ಬರೆದರು. ಇವರೆದುರು ಜೆಡಿಎಸ್‌ನ ಎ.ಆರ್‌.ಕೃಷ್ಣಮೂರ್ತಿ ಸೋತಿದ್ದರು. ಅದಾದ ಬಳಿಕ ಎ.ಆರ್‌. ಕೃಷ್ಣಮೂರ್ತಿ ಚುನಾವಣ ರಾಜಕೀಯದಲ್ಲಿ ಗೆಲುವೇ ಕಂಡಿಲ್ಲ. ವಿಪರ್ಯಾಸವೆಂದರೆ ಆ ದಿನ ಅವರ ವಾಹನ ಚಾಲಕ ಮತ ಚಲಾಯಿಸಿರಲಿಲ್ಲ ಎಂದು ಹೇಳಲಾಗುತ್ತದೆ.

ಅದೇ ರೀತಿ, 2008ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ಸಿ.ಪಿ.ಜೋಷಿ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದರು. ಆದರೆ ದುರದೃಷ್ಟವಶಾತ್‌ ಜೋಷಿಯವರು ಕೇವಲ ಒಂದು ಮತದಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣ ಸಿಂಗ್‌ ಚೌವ್ಹಾಣ್‌ ವಿರುದ್ಧ ಸೋತಿದ್ದರು. ಮತದಾನದ ಸಮಯದಲ್ಲಿ ಜೋಷಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ಜೋಷಿ ಗೆಲುವಿಗಾಗಿ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಹೋಗಿದ್ದರು ಎಂದು ಹೇಳಲಾಗುತ್ತದೆ.

ಕಡಿಮೆ ಅಂತರದಿಂದ ಸೋತವರ ಇತಿಹಾಸ
1978ರಿಂದ 2018ರ ‌ರೆಗಿನ ವಿಧಾನಸಭಾ ಚುನಾವಣೆಗಳಲ್ಲಿ 1ರಿಂದ 100ರೊಳಗಿನ ಅಂತರದಲ್ಲಿ 15 ಮಂದಿ ಗೆದ್ದಿದ್ದಾರೆ. 1967ರಿಂದ 2019ರ ವರೆಗಿನ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಸಾವಿರ ಮತಗಳ ಅಂತರದಿಂದ ಐವರು ಗೆದ್ದಿದ್ದಾರೆ. ಇಲ್ಲಿ ಗೆದ್ದವರು ಮತ್ತು ಸೋತವರಿಗೆ ಒಂದೊಂದು ಮತದ ಮಹತ್ವ ಚೆನ್ನಾಗಿ ಮನವರಿಕೆಯಾಗಿದೆ. 2004ರಲ್ಲಿ ಒಂದು ಮತದಿಂದ ಗೆದ್ದಿದ್ದ ಆರ್‌.ಧ್ರುವನಾರಾಯಣ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1,817 ಮತಗಳಿಂದ ಸೋತಿದ್ದರು.

ಘಟಾನುಘಟಿಗಳ ಸೋಲು-ಗೆಲುವು
ಸತತ ಏಳು ಬಾರಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಮಾಜಿ ಸಿಎಂ ದಿ| ಧರಂ ಸಿಂಗ್‌ ಅವರು ಎಂಟನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಗೆಲುವಿನ ನಾಗಲೋಟಕ್ಕೆ ತಡೆ ಹಾಕಿದ್ದು ಕೇವಲ 70 ಮತಗಳಷ್ಟೇ. ಅದೇ ರೀತಿ 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದದ್ದು ಕೇವಲ 257 ಮತಗಳ ಅಂತರದಿಂದ.

ಒಂದು ಮತದ ಅಂತರದಿಂದ ಸೋಲು
ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರಕಾರ 1999ರಲ್ಲಿ ಕೇವಲ 1 ಮತದ ಅಂತರದಿಂದ ವಿಶ್ವಾಸಮತ ಕಳೆದುಕೊಂಡಿದ್ದು, ಸಂಸದೀಯ ವ್ಯವಸ್ಥೆಯಲ್ಲಿ ಸಾಕ್ಷಿಯಾಗಿ ಉಳಿದಿದೆ.

ವಿಧಾನಸಭೆಯಲ್ಲಿ ಅತಿ ಕಡಿಮೆ ಅಂತರದ ಗೆಲುವು
-2004- ಆರ್‌. ಧ್ರುವನಾರಾಯಣ ಸಂತೆಮರಹಳ್ಳಿ ಕಾಂಗ್ರೆಸ್‌- 1
-2004- ಬಿ. ಶಿವರಾಂ ಗಂಡಸಿ ಕಾಂಗ್ರೆಸ್‌- 18
-2008- ದಿನಕರ ಶೆಟ್ಟಿ -ಕುಮಟಾ- ಜೆಡಿಎಸ್‌- 20
-1983 -ಅಪ್ಪಣ್ಣ ಹೆಗ್ಡೆ -ಬೈಂದೂರು- ಜನತಾ ಪಾರ್ಟಿ- 24
-1985 -ಬಿ.ಬಿ. ನಿಂಗಯ್ಯ -ಮೂಡಿಗೆರೆ -ಜನತಾ ಪಾರ್ಟಿ 33
-1983 -ಎಂ. ಮಹದೇವು- ನಂಜನಗೂಡು- ಕಾಂಗ್ರೆಸ್‌- 45
-1978 -ಜಿ.ಎಚ್‌. ಅಶ್ವತ್ಥ ರೆಡ್ಡಿ -ಜಗಳೂರು- ಜನತಾ ಪಾರ್ಟಿ- 59
-2008- ದೊಡ್ಡನಗೌಡ ನರಿಬೋಳ- ಜೇವರ್ಗಿ- ಬಿಜೆಪಿ- 70
-1985- ಪಟಮಕ್ಕಿ ರತ್ನಾಕರ- ತೀರ್ಥಹಳ್ಳಿ- ಕಾಂಗ್ರೆಸ್‌- 74
-1985- ಕೆ.ಬಿ.ಶಾಣಪ್ಪ- ಶಹಬಾದ್‌- ಸಿಪಿಐ- 75
-1985- ಸಿ.ಪಿ.ಮೂಡಲಗಿರಿಯಪ್ಪ -ಶಿರಾ- ಕಾಂಗ್ರೆಸ್‌- 82
-1985- ಎಚ್‌.ಜಿ. ಗೋವಿಂದೇಗೌಡ -ಶೃಂಗೇರಿ- ಜನತಾ ಪಾರ್ಟಿ- 83
-1983- ಡಿ.ಜಿ.ಜಮಾದಾರ್‌- ಚಿಂಚೊಳ್ಳಿ- ಕಾಂಗ್ರೆಸ್‌- 88
-1989- ಎ.ಕೆ.ಅನಂತಕೃಷ್ಣ -ಶಿವಾಜಿನಗರ-ಕಾಂಗ್ರೆಸ್‌-91
-1985- ಎ. ಕೃಷ್ಣಪ್ಪ -ವರ್ತೂರು- ಕಾಂಗ್ರೆಸ್‌ -98
– 2013- ಭೀಮಾ ನಾಯಕ್‌- ಹಗರಿಬೊಮ್ಮನಹಳ್ಳಿ-ಕಾಂಗ್ರೆಸ್‌-125
– 2018- ಪ್ರತಾಪಗೌಡ ಪಾಟೀಲ್‌-ಮಸ್ಕಿ-ಬಿಜೆಪಿ-213

ಲೋಕಸಭೆಯಲ್ಲಿ ಅತಿ ಕಡಿಮೆ ಅಂತರದ ಗೆಲುವು
– 1967 ಕೆ.ಲಕ್ಕಪ್ಪ ತುಮಕೂರು ಪಿಎಸ್ಪಿ-261
– 1991 ಚೆನ್ನಯ್ಯ ಒಡೆಯರ್‌ ದಾವಣಗೆರೆ ಕಾಂಗ್ರೆಸ್‌- 455
– 2004 ವೆಂಕಟೇಶ್‌ ನಾಯಕ್‌ ರಾಯಚೂರು ಕಾಂಗ್ರೆಸ್‌ -508
– 2014 ಬಿ.ವಿ.ನಾಯಕ್‌ ರಾಯಚೂರು ಕಾಂಗ್ರೆಸ್‌- 1,499

~ ರಫೀಕ್‌ ಅಹ್ಮದ್‌


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ