ಹುಬ್ಬಳ್ಳಿ: ನನ್ನ ಗುರಿಯಿರುವುದು ಈ ಬಾರಿ ಶಾಸಕನಾಗಿ ಆಯ್ಕೆಯಾಗಿ 24X7 ಕುಡಿಯುವ ನೀರು ಯೋಜನೆ ಜಾರಿ ಮಾಡುವುದು. ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದು. ಆದರೆ ಬಹಳ ಜನ ನಾನು ಸೋಲಬೇಕು ಎಂದು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿನಡೆಸಿದ ಹುಬ್ಬಳ್ಳಿ-ದಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಶೆಟ್ಟರ್, ಬಿಜೆಪಿ ನಾಯಕರು ನನ್ನನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ನಾನು ಕಾಂಗ್ರೆಸ್ ಸೇರಿದ ಬಳಿಕ ಬಿಜೆಪಿ ನಾಯಕರಿಗೆ ಚಿಂತೆ ಶುರುವಾಗಿದೆ. ನಾನು ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ. ಇದೇ ಕಾರಣಕ್ಕೆ ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಸೋಲಿಸಬೇಕು ಎಂದು ತಂತ್ರ ರೂಪಿಸಿದ್ದಾರೆ ಎಂದು ಕಿಡಿಕಾರಿದರು.
ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಮುಗಿಸುವ ಷಡ್ಯಂತ್ರ ನಡೆದಿದೆ. ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. ಯಡಿಯೂರಪ್ಪನವರನ್ನು ಯಾವ ಕಾರಣಕ್ಕೆ ಕೆಳಗಿಳಿಸಿದರು ಅನ್ನೋದಕ್ಕೆ ಉತ್ತರ ಇಲ್ಲ. ಈಶ್ವರಪ್ಪನವರನ್ನು ಸಂತೋಷ್ ಮುಗಿಸಿದರು. ಈಶ್ವರಪ್ಪನವರಾಗಿಯೇ ನಿವೃತ್ತಿ ಘೋಷಣೆ ಮಾಡುವಂತೆ ಮಾಡಲಾಯಿತು. ಬಿಜೆಪಿಯಲ್ಲಿ ಬಲಾಡ್ಯರನ್ನು ಮುಗಿಸುವ ಕೆಲಸವನ್ನು ಬಿ.ಎಲ್.ಸಂತೋಷ್ ಮಾಡುತ್ತಿದ್ದಾರೆ. ಜಿ ಹುಜೂರ್ ಎಂದು ಹೇಳುವವರಿಗೆ ಮಾತ್ರ ಅಲ್ಲಿ ಅವಕಾಶ. ಈ ಗುಮಾಮಗಿರಿ ಪದ್ಧತಿಯ ವಿರುದ್ಧ ನಾನು ಸಿಡಿದೆದ್ದು ಬಂದಿದ್ದೇನೆ. ಹಿರಿಯನಾಯಕರನ್ನು ಕೇಅಲ ಚುನಾವಣೆಗೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅತಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.