Breaking News

ಬೆಳಗಾವಿ ದಕ್ಷಿಣ ಅಭಯ್ ಪಾಟೀಲ ರಿಗೆ ತೀವ್ರ ಪೈಪೋಟಿ ಕೊಡಲು ಮುಂದಾದ ರಮಾಕಾಂತ ಕೊಂಡಸ್ಕರ

Spread the love

ಬೆಳಗಾವಿ: ಇಲ್ಲಿನ ದಕ್ಷಿಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಅಭಿವೃದ್ಧಿ ಮತ್ತು ಭಾಷೆ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮುಂದುವರಿದಿವೆ. ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಸತತ ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸುವ ತವಕದಲ್ಲಿದ್ದಾರೆ.

ಮತ್ತೊಂದೆಡೆ, ‘ಕಮಲ’ ಪಾಳಯದ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಅಭ್ಯರ್ಥಿ ರಮಾಕಾಂತ ಕೊಂಡೂಸ್ಕರ್‌ ಕಸರತ್ತು ನಡೆಸಿದ್ದಾರೆ. ಇಬ್ಬರು ಅಭ್ಯರ್ಥಿಗಳು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ಕ್ಷೇತ್ರದ ಜನ ಅಭಿವೃದ್ಧಿ ಜತೆಗೆ ನಿಲ್ಲುತ್ತಾರೆ

ಕ್ಷೇತ್ರದಲ್ಲಿ ಪ್ರಚಾರ ಹೇಗೆ ಸಾಗಿದೆ?

-ಇಡೀ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಎಲ್ಲಿಯೇ ಪ್ರಚಾರಕ್ಕೆ ಹೋದರೂ, ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿವಿಧ ನಾಯಕರು ಪ್ರಚಾರಕ್ಕೆ ಬಂದಾಗ, ಸಾವಿರಾರು ಜನರು ಸೇರುತ್ತಿದ್ದಾರೆ. ಯುವ ಮನಸ್ಸುಗಳು ಬಿಜೆಪಿಯತ್ತ ಒಲವು ತಳೆದಿವೆ. ಈ ಬಾರಿಯೂ ಬಿಜೆಪಿ ಗೆಲುವಿನ ಬಾವುಟ ಹಾರಿಸುವುದು ನಿಶ್ಚಿತ.

ಎಂಇಎಸ್‌ ಬಣಗಳೆಲ್ಲ ಈಗ ಒಂದಾಗಿವೆ. ಇದರಿಂದ ನಿಮಗೆ ಹಿನ್ನಡೆಯಾಗಬಹುದೇ?

-ಹಿನ್ನಡೆ ಪ್ರಶ್ನೆಯೇ ಇಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ತನ್ನದೇಯಾದ ಶಕ್ತಿಯಿದೆ. ಜನರು ವಿವಾದ, ದಬ್ಬಾಳಿಕೆಗಳಿಗಿಂತ ಅಭಿವೃದ್ಧಿಪರವಾಗಿ ನಿಲ್ಲುತ್ತಾರೆ ಎನ್ನುವ ವಿಶ್ವಾಸವಿದೆ.

ನಿಮ್ಮ ಕ್ಷೇತ್ರದಲ್ಲಿ ನೇಕಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ಸಮುದಾಯಕ್ಕೆ ಸೇರಿದ ಪ್ರಭಾವತಿ ಮಾಸ್ತಮರ್ಡಿ ಕಾಂಗ್ರೆಸ್‌ ಸ್ಪರ್ಧಿಸಿರುವುದರಿಂದ ಮತಗಳ ವಿಭಜನೆಯಾಗಬಹುದೇ?

-ಕಳೆದ ಬಾರಿ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ನೇಕಾರ ಸಮುದಾಯದವರೇ ಆದ ಎಂ.ಡಿ.ಲಕ್ಷ್ಮಿನಾರಾಯಣ ಸ್ಪರ್ಧಿಸಿದ್ದರು. ಆದರೆ, ನೇಕಾರರು ಅವರಿಗಿಂತ ನನಗೇ ಅಧಿಕ ಮತಗಳನ್ನು ನೀಡಿ ಗೆಲ್ಲಿಸಿದ್ದರು. ಹಿಂದಿನಿಂದಲೂ ನೇಕಾರರು ನನ್ನನ್ನು ತಮ್ಮ ಮನೆಮಗನೆಂದು ಬೆಂಬಲಿಸುತ್ತ ಬಂದಿದ್ದಾರೆ. ನಾನು ಅವರ ಬೇಡಿಕೆಗಳನ್ನೆಲ್ಲ ಈಡೇರಿಸಲು ಪ್ರಯತ್ನಿಸಿದ್ದೇನೆ. ಈ ಬಾರಿಯೂ ಬಿಜೆಪಿಗೆ ಬೆಂಬಲ ನೀಡಲಿದ್ದು, ಮತಗಳ ವಿಭಜನೆಯಾಗದು.

ನಿಮಗೆ ಎದುರಾಳಿ ಯಾರು?

-ನನಗೆ ಯಾರೂ ಎದುರಾಳಿಗಳಿಲ್ಲ. ನಾನು ಕೈಗೊಂಡ ಅಭಿವೃದ್ಧಿ ಕೆಲಸ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳೇ ನನಗೆ ಶ್ರೀರಕ್ಷೆ.

ಶಾಸಕರಾಗಿ ಆಯ್ಕೆಯಾದರೆ ಯಾವ ಅಭಿವೃದ್ಧಿ ಕೆಲಸಗಳನ್ನು ಆದ್ಯತೆ ಮೇಲೆ ಮಾಡುತ್ತೀರಿ?

-ಕ್ಷೇತ್ರದ ಜನರಿಗೆ ಉದ್ಯೋಗವಕಾಶ ಸೃಷ್ಟಿಗೆ ಒತ್ತು ನೀಡುತ್ತೇನೆ. ಐಟಿ ಪಾರ್ಕ್‌, ಸೆಮಿ-ಕಂಡಕ್ಟರ್‌ ಪಾರ್ಕ್‌ ಹಾಗೂ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸುತ್ತೇನೆ. ಕೊರೊನಾ ಹಾವಳಿ ಇರದಿದ್ದರೆ, ಚುನಾವಣೆಗೂ 6 ತಿಂಗಳು ಮುನ್ನವೇ ಎಲ್ಲ ಕಾಮಗಾರಿ ಮುಗಿಯುತ್ತಿದ್ದವು. ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಒಂದಿಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇನೆ.

ಅಭಯ ಪಾಟೀಲ,

ಬಿಜೆಪಿ ಅಭ್ಯರ್ಥಿ

 ರಮಾಕಾಂತ್‌ ಕೊಂಡೂಸ್ಕರ್‌ಸರ್ವಭಾಷಿಕರೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೀರಿ. ವಾತಾವರಣ ಹೇಗಿದೆ? -ಕ್ಷೇತ್ರದಲ್ಲಿ ಈಗ ಎಂಇಎಸ್‌ ಪರವಾಗಿ ಗಾಳಿ ಬೀಸುತ್ತಿದೆ. ಯಾವುದೇ ಪ್ರದೇಶಕ್ಕೆ ಪ್ರಚಾರಕ್ಕೆ ತೆರಳಿದಾಗ ಜನರು ಅಭಿಮಾನದಿಂದ ಸ್ವಾಗತಿಸುತ್ತಿದ್ದಾರೆ. ನಮ್ಮತ್ತ ಭರವಸೆಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಈ ಬೆಳವಣಿಗೆ ನೋಡಿದರೆ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಮೂಡಿದೆ. ಯಾವ ಅಂಶಗಳನ್ನು ಇಟ್ಟುಕೊಂಡು ಮತ ಕೇಳುತ್ತಿದ್ದೀರಿ? -ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳಾಗಿಲ್ಲ. ವಿವಿಧ ಕ್ಷೇತ್ರಗಳ ಜನರ ಮೇಲೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಹಾಗೂ ಅಭಿವೃದ್ಧಿ ಕೆಲಸ ಕೈಗೊಳ್ಳಲು ಎಂಇಎಸ್‌ಗೆ ಮತ ನೀಡುವಂತೆ ಕೇಳುತ್ತಿದ್ದೇವೆ. ಎಲ್ಲ ವರ್ಗಗಳ ಜನರನ್ನೂ ಸಂಪರ್ಕಿಸುತ್ತಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಮ್ಮ ಪರವಾಗಿ ಪ್ರಚಾರ ಮಾಡುವ ನಾಯಕರಿಗೆ ಜನರ ಸ್ಪಂದನೆ ಹೇಗಿದೆ? -ಶಿವಸೇನಾ(ಉದ್ಧವ್‌ ಠಾಕ್ರೆ ಬಣ) ರಾಜ್ಯ ವಕ್ತಾರ ಸಂಜಯ್‌ ರಾವುತ್‌ ನಮ್ಮ ಕ್ಷೇತ್ರದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಸಾವಿರಾರು ಜನ ಸೇರಿದ್ದರು. ಯಾವುದೇ ನಾಯಕರು ಪ್ರಚಾರಕ್ಕೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ನಮಗೆ ಯಾಕೆ ಮತ ಹಾಕಬೇಕೆಂದು ನಾಯಕರು ಮನವರಿಕೆ ಮಾಡಿಕೊಡುತ್ತಿದ್ದಾರೆ. ಮರಾಠಿ ಹೊರತಾಗಿ ಉಳಿದ ಭಾಷಿಕರ ಮನಸ್ಸು ಹೇಗೆ ಗೆಲ್ಲುತ್ತೀರಿ? -ಇದು ಭಾಷೆ ಹೆಸರಲ್ಲಿ ನಡೆಯುತ್ತಿರುವ ಚುನಾವಣೆಯಲ್ಲ. ಅನ್ಯಾಯದ ವಿರುದ್ಧ ಹೋರಾಟ. ಮರಾಠಿಗರಷ್ಟೇ ಅಲ್ಲ;ಸರ್ವಭಾಷಿಕರೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಶಾಸಕರಾಗಿ ಆಯ್ಕೆಯಾದರೆ ಯಾವ ಕೆಲಸಗಳನ್ನು ಆದ್ಯತೆ ಮೇಲೆ ಕೈಗೊಳ್ಳುತ್ತೀರಿ? -ಬಡ ಜನರ ಸಂಕಷ್ಟಕ್ಕೆ ಮಿಡಿಯುತ್ತೇನೆ. ಎಲ್ಲ ವರ್ಗಗಳ ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಎಲ್ಲ ಆಯಾಮಗಳಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುತ್ತೇನೆ. ರಮಾಕಾಂತ್‌ ಕೊಂಡೂಸ್ಕರ್‌ ಎಂಇಎಸ್‌ ಅಭ್ಯರ್ಥಿ


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ