ರಾಯಚೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿಯಾದ ಮಳೆ ಜನಜೀವನವನ್ನ ಅಸ್ತವ್ಯಸ್ತಮಾಡಿದೆ. ರೈತರು ಬೆಳೆ ಕಳೆದುಕೊಂಡಿದ್ದಾರೆ, ನೂರಾರು ಮನೆಗಳು ಬಿದ್ದಿವೆ. ಇದರ ಜೊತೆ ಜೊತೆಗೆ ಜಿಲ್ಲೆಯ ರಸ್ತೆಗಳು ಸಹ ಹಾಳಾಗಿ ಹೋಗಿವೆ. ಜಿಲ್ಲೆಯಿಂದ ಆರಂಭವಾಗುವ ರಾಯಚೂರು- ಬಾಚಿ ರಾಜ್ಯ ಹೆದ್ದಾರಿ ಸಂಖ್ಯೆ 20 ಇದು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ. ರಸ್ತೆ ತುಂಬಾ ಎಲ್ಲಿ ನೋಡಿದ್ರೂ ಆರಡಿ ಮೂರಡಿ ಗುಂಡಿಗಳೇ ಕಾಣಿಸುತ್ತವೆ.
ರಾಯಚೂರು ಹೊರವಲಯದ ಸಾಥಮೈಲ್ ನಿಂದ ಕಲ್ಮಲವರೆಗೆ ಇರುವ ರಸ್ತೆ ಆ ದೇವರಿಗೆ ಪ್ರೀತಿ ಎನ್ನುವಂತಿದೆ. ಇಪ್ಪತ್ತು ನಿಮಿಷದ ದಾರಿಯನ್ನ ಕ್ರಮಿಸಲು ಕನಿಷ್ಠ ಒಂದು ಗಂಟೆ ತಗುಲುತ್ತದೆ. ರಸ್ತೆ ದಾಟಿ ಬಂದ ಮೇಲೆ ಮೈಕೈ ನೋವು ಗ್ಯಾರೆಂಟಿ. ವಾಹನಗಳು ಸುರಕ್ಷಿತವಾಗಿ ಇರುತ್ತವೆ ಅನ್ನೋ ನಂಬಿಕೆಯೂ ಇಲ್ಲಾ ಅನ್ನುವಷ್ಟರ ಮಟ್ಟಿಗೆ ರಸ್ತೆ ಹಾಳಾಗಿ ಹೋಗಿದೆ. ಹೀಗಾಗಿ ಪ್ರಯಾಣಿಕರು ಪ್ರಾಣ ಕೈಯಲ್ಲಿ ಹಿಡಿದುಕೊಂಡೆ ಪ್ರಯಾಣ ಮಾಡಬೇಕಿದೆ.
ಕಲ್ಮಲದಿಂದ ಸಾಥ್ ಮೈಲ್ ವರೆಗೆ ರಸ್ತೆಗುಂಡಿಗಳನ್ನ ಮುಚ್ಚಲು 35 ಲಕ್ಷ ರೂಪಾಯಿ ಟೆಂಡರ್ ಆಗಿತ್ತು. ಆದ್ರೆ ಗುಂಡಿ ಮುಚ್ಚುವ ಕೆಲಸಮಾತ್ರ ನೆನೆಗುದಿಗೆ ಬಿದ್ದಿದೆ. ಈಗ ಲೋಕೋಪಯೋಗಿ ಇಲಾಖೆ ದೇವದುರ್ಗ ಕ್ರಾಸ್ ನಿಂದ ಸಾಥ್ ಮೈಲ್ ವರೆಗೆ ರಸ್ತೆ ರಿಪೇರಿಗೆ 3 ಕೋಟಿ ರೂಪಾಯಿ ಪ್ರಸ್ತಾವನೆಯನ್ನ ಇಲಾಖೆಗೆ ಕಳುಹಿಸಿದೆ. ಕೋವಿಡ್ ಕಾರಣಕ್ಕೆ ಕಾಮಗಾರಿ ಅನುಮೋದನೆ ಆಗುತ್ತಿಲ್ಲ ಹಣ ಬಿಡುಗಡೆ ಮಾಡುತ್ತಿಲ್ಲ ಅಂತ ಪಿಡಬ್ಲ್ಯೂಡಿ ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದೆಡೆ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ನೋಟಿಫಿಕೆಷನ್ ಮಾಡಲಾಗಿದೆ. ಕನಿಷ್ಠ ಗುಂಡಿಗಳನ್ನ ಮುಚ್ಚುವಂತ ಕೆಲಸವನ್ನೂ ಅಧಿಕಾರಿಗಳು ಮಾಡುತ್ತಿಲ್ಲ. ಜನಪ್ರತಿನಿಧಿಗಳಂತೂ ತಮಗೆ ಸಂಬಂಧವೇ ಇಲ್ಲವೆಂಬುವಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ವರ್ಷಗಳಿಂದ ಹಂತಹಂತವಾಗಿ ರಸ್ತೆ ಹದಗೆಡುತ್ತ ಬರುತ್ತಿದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಈಗ ನಿರಂತರವಾಗಿ ಸುರಿದ ಅತಿವೃಷ್ಠಿಯ ಮಳೆ ರಸ್ತೆಯನ್ನ ಸಂಪೂರ್ಣವಾಗಿ ಹದಗೆಡಿಸಿದೆ. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆಯೇ ತಡವಾದ ಕಾರಣಕ್ಕೆ ರೋಗಿಗಳು ಸಾವನ್ನಪ್ಪಿದ್ದಾರೆ, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇವೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ವೇಗವಾಗಿ ಬಂದರೆ ಭೀಕರ ಅಪಘಾತ ಕಟ್ಟಿಟ್ಟ ಬುತ್ತಿ. ಗರ್ಭಿಣಿಯರಂತೂ ಈ ರಸ್ತೆಯಲ್ಲಿ ಓಡಾಡಲು ಹೆದರುವಂತ ಪರಸ್ಥಿತಿಯಿದೆ.
ರಾಜ್ಯ ಹೆದ್ದಾರಿಯಾಗಿರುವುದರಿಂದ ಬೈಕ್, ಕಾರು, ಬಸ್ ಅಲ್ಲದೆ ಭಾರದ ವಾಹನಗಳ ಓಡಾಟ ಹೆಚ್ಚಾಗಿದೆ. ಪ್ರತಿನಿತ್ಯ ಕನಿಷ್ಟ 12 ಸಾವಿರಕ್ಕೂ ಹೆಚ್ಚು ವಾಹನ ರಾಯಚೂರಿನಿಂದ ಕಲ್ಮಲ ಮಾರ್ಗದಲ್ಲಿ ಓಡಾಡುತ್ತವೆ. ಹೀಗಾಗಿ ರಸ್ತೆಯ ಸುಧಾರಣೆ ಆದಷ್ಟು ಶೀಘ್ರದಲ್ಲಿ ಆಗಬೇಕಿದೆ. ರಾಯಚೂರಿನಿಂದ ಉಳಿದ ಎಲ್ಲಾ ಆರು ತಾಲೂಕುಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವನ್ನ ಸರಿಪಡಿಸಬೇಕು ಅಂತ ಜಿಲ್ಲೆಯ ಜನ ಒತ್ತಾಯಿಸಿದ್ದಾರೆ.