ಜಿನಿವಾ,ಜು.8- ಕಿಲ್ಲರ್ ಕೊರನಾ ಸೋಂಕಿನ ಕಣಗಳು ಗಾಳಿಯಲ್ಲೂ ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿಶ್ವಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮರಿಯಾ ವ್ಯಾನ್ ಕೆರ್‍ಕೋವೆ ಅವರು ಕೋವಿಡ್ ಸೋಂಕು ಗಾಳಿಯಲ್ಲಿ ಹರಡುತ್ತದೆ ಎಂದು 32 ದೇಶಗಳ 239 ವಿಜ್ಞಾನಿಗಳು ಸಾಕ್ಷೀಕರಿಸಿರುವ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
ಈ ಮೊದಲು ಕೊರೊನಾ ಸೋಂಕು ಕಣ್ಣು ಮೂಗು ಬಾಯಿ ಮುಟ್ಟಿದಾಗ ಮಾತ್ರ ಹರಡುತ್ತದೆ ಎಂಬ ವಾದ ಮಂಡನೆಯಾಗಿತ್ತು. ವಿಜ್ಞಾನಿಗಳ ಸಂಶೋಧನೆಗೆ ಅನುಗುಣವಾಗಿ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಒಪಿಕೊಂಡಿತು.
ಕೊಲರೊಡೊ ವಿಶ್ವವಿದ್ಯಾಲಯದ ರಾಸಾಯನಿಕ ತಜ್ಞ ಜೋಸ್ ಜಿಮೆನ್ಜ್ ಅವರ ತಂಡ ಗಾಳಿಯಲ್ಲೂ ಕೋವಿಡ್ ಹರಡಲಿದೆ ಎಂ ಸಂಶೋಧನೆಯನ್ನು ನಡೆಸಿದೆ. 32 ದೇಶಗಳ 239 ವಿಜ್ಞಾನಿಗಳು ಅದಕ್ಕೆ ಪೂರಕವಾದ ಪುರಾವೆಗಳನ್ನು ಒದಗಿಸಿದ್ದಾರೆ.
ಅಷ್ಟೂ ಮಂದಿ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ವಿಷಯದಲ್ಲಿ ಈ ಮೊದಲು ಮಂಡಿಸಿದ್ದ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ವಾದವನ್ನು ಒಪ್ಪಿಕೊಳ್ಳಲಾಗಿದೆ ಎಂದು ಮರಿಯಾ ತಿಳಿಸಿದ್ದಾರೆ.
ಹೀಗಾಗಿ ಕೋವಿಡ್ ಸಾಂಕ್ರಾಮಿಕದ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಗಾಳಿಯಲ್ಲೂ ಕೂಡ ಸೋಂಕಿನ ಕಣಗಳು ತೇಲಿ ಆರೋಗ್ಯವಂತರನ್ನೂ ಸೇರಿ ಪೀಡಿಸುವ ಆತಂಕ ಹೆಚ್ಚಾಗಿದೆ. ಇನ್ನು ಮುಂದೆ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕೋವಿಡ್ ಕುರಿತಂತೆ ರೂಪಿಸಲಾಗಿರುವ ಮಾರ್ಗಸೂಚಿಗಳಲ್ಲೂ ಮಹತ್ವದ ಬದಲಾವಣೆ ತರುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ.