ಹುಬ್ಬಳ್ಳಿ: ವಿಧಾನಸಭಾ ಚುನಾವಣಾ ಅಖಾಡ ಕ್ಷಣ ಕ್ಷಣಕ್ಕೂ ರಂಗೆರುತ್ತಿದ್ದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಸೋಲಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಸಾಲು ಸಾಲು ಸಭೆ, ವರಿಷ್ಠರಿಂದ ಮತಯಾಚನೆ ಮೂಲಕ ರಣತಂತ್ರ ಹೆಣೆಯುತ್ತಿದ್ದಾರೆ. ತತ್ವ ಸಿದ್ಧಾಂತಗಳಿಲ್ಲದ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಶೆಟ್ಟರ್ ಅವರನ್ನು ಸೋಲಿಸುವುವ ಜವಾಬ್ದಾರಿ ನಾನು ತೆಗೆದುಕೊಂಡಿದ್ದೇನೆ ಎಂದು ಗುಡಿಗಿದ್ದಾರೆ. ಯಡಿಯೂರಪ್ಪ ಹೇಳಿಕೆಗಳಿಗೆ ಜಗದೀಶ್ ಶೆಟ್ಟರ್ ಕೌಂಟರ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನನ್ನು ಸೋಲಿಸಲು ಹಿಂದಿನಿಂದ ಸಭೆ ನಡೆಸುವುದು, ಹೇಳಿಕೆಗಳನ್ನು ಕೊಡುವುದು ಕಾರ್ಯಕರ್ತರನ್ನು ಎತ್ತಿಕಟ್ಟುವುದು ಮಾಡುವುದು ಬಿಟ್ಟು ನೀವೇ ನೇರವಾಗಿ ಬನ್ನಿ. ಯಾರೇ ಬಂದರು ಭಯ ಪಡುವ ಪ್ರಶ್ನೆಯೇ ಇಲ್ಲ. ಹುಬ್ಬಳ್ಳಿಯ ಜನ ನನ್ನ ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ನನ್ನ ತತ್ವ ಸಿದ್ಧಾಂತಗಳ ಬಗ್ಗೆ ಪ್ರಶ್ನೆ ಮಾಡುವ ಯಡಿಯೂರಪ್ಪನವರೇ ನೀವು ಅಂದು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ನಿಮ್ಮ ತತ್ವ, ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ನೈತಿಕತೆ ಇಲ್ಲ ಎಂದು ಶೆಟ್ಟರ್ ವಿರುದ್ಧ ವಗದಾಳಿ ನಡೆಸುವ ಬಿಜೆಪಿ ನಾಯಕರಿಗೂ ತಿರುಗೇಟು ನೀಡಿರುವ ಜಗದೀಶ್ ಶೆಟ್ಟರ್, ಸಿಡಿ ಸ್ಟೇ ತಂದ ಮಂತ್ರಿಗಳಿಗೆ ಟಿಕೆಟ್ ಕೊಟ್ಟಿದ್ದೀರಾ. 6-7 ಮಂತ್ರಿಗಳು ಸಿಡಿ ಕೇಸ್ ನಲ್ಲಿ ಕೋರ್ಟ್ ನಿಂದ ಸ್ಟೇ ತಂದಿದ್ದಾರೆ. ಅಂತವರಿಗೆ ಟಿಕೆಟ್ ನೀಡಲಾಗಿದೆ. 80 ಕ್ರಿಮಿನಲ್ ಕೇಸ್ ಇದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ ತತ್ವ, ಸಿದ್ಧಾಂತಗಳು, ನೈತಿಕತೆಗಳು ಇಲ್ಲಿ ಅನ್ವಯಿಸಲ್ವಾ? ಇದು ಯಾವ ನೈತಿಕತೆ? ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದು, ನಿಷ್ಠೆಯಿಂದ ಇರುವವರಿಗೆ ಅವಮಾನ ಮಾಡಿದ್ದೀರಿ. ಅನಿವಾರ್ಯವಾಗಿ ಪಕ್ಷ ಬಿಟ್ಟು ನಮ್ಮ ಭದ್ರತೆ ನಾವು ನೋಡಿಕೊಳ್ಳಬೇಕಾಯಿತು. ಈಗ ಆರೋಪ ಮಾಡಿ ಪ್ರಯೋಜನವಿಲ್ಲ ಚುನಾವಣೆ ಎದುರಿಸಬೇಕಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.