ಬೆಂಗಳೂರು: ಮೇ 10ರಂದು ನಡೆಯ ಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆದಿನ ವಾಗಿದ್ದು, ಬುಧವಾರ 1,110 ನಾಮ ಪತ್ರಗಳು ಸಲ್ಲಿಕೆಯಾಗಿವೆ. 935 ಅಭ್ಯರ್ಥಿಗಳು ತಮ್ಮ ಶಕ್ತಿಪ್ರದರ್ಶನಕ್ಕೆ ಸಾವಿರಾರು ಜನರನ್ನು ಸೇರಿಸಿದ್ದರಿಂದಾಗಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಚುನಾವಣೆಯಲ್ಲಿ ಗೆಲ್ಲುವುದೊಂದನ್ನೇ ಎಲ್ಲ ರಾಜಕೀಯ ಪಕ್ಷಗಳು ಮಾನದಂಡವಾಗಿ ಇಟ್ಟುಕೊಂಡಿದ್ದ ರಿಂದಾಗಿ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವವರೆಗೂ ಆಕಾಂಕ್ಷಿಗಳು ಅಲ್ಲಿಂದಿಲ್ಲಿಗೆ ಜಿಗಿತವನ್ನು ನಡೆಸುತ್ತಲೇ ಇದ್ದರು. ಕೊನೆವರೆಗೂ ಟಿಕೆಟ್‌ಗಾಗಿ ಚೌಕಾಶಿ ನಡೆಸಿದವರು, ಒಂದು ಕಡೆ ಟಿಕೆಟ್ ಸಿಗದೇ ಇದ್ದಾಗ ಮತ್ತೊಂದು, ಮಗುದೊಂದು ಪಕ್ಷವನ್ನು ಆರಿಸಿಕೊಂಡರು. ಜಿಗಿ ನೆಗೆದಾಟ ಬಹುತೇಕ ತಾರ್ಕಿಕ ಅಂತ್ಯ ಕಂಡಂತಾಗಿದ್ದು, ಚುನಾವಣೆ ಘೋಷಣೆಗೆ ಮುನ್ನ ಇದ್ದ ಕಣ ಚಿತ್ರಣವೇ ತಲೆ ಕೆಳಗಾದಂತಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಚಿತ್ರನಟ ಸುದೀಪ್ ಜತೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿ, 2ನೇ ಬಾರಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ಬಾರಿ ವರುಣಕ್ಕೆ ಮರಳಿರುವ ಸಿದ್ದರಾಮಯ್ಯ ದೇಗುಲಗಳಿಗೆ ಭೇಟಿ ಕೊಟ್ಟು, ಶಕ್ತಿ ಪ್ರದರ್ಶನದ ನಡೆಸಿಯೇ ನಾಮಪತ್ರ ಸಲ್ಲಿಸಿದರು. ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಕಾಲಿಟ್ಟ ಜಗದೀಶ ಶೆಟ್ಟರ್, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರಾದ ವಿ. ಸೋಮಣ್ಣ, ಬಿ.ಸಿ. ನಾಗೇಶ, ಹಾಲಪ್ಪ ಆಚಾರ್, ವಿ. ಸುನೀಲ್ ಕುಮಾರ್ ಹಾಗೂ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ ನಾಮಪತ್ರ ಸಲ್ಲಿಸಿದ ಪ್ರಮುಖರು.
ಬದಲಾದ ಚಿತ್ರಣ: ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನ ವರುಣ, ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರನ್ನು ಕಟ್ಟಿ ಹಾಕುವವರಿಲ್ಲ ಎಂಬ ಚರ್ಚೆ ನಡೆದಿತ್ತು. ಹೊಸ ದಾಳ ಉರುಳಿಸಿದ ಬಿಜೆಪಿ ವರಿಷ್ಠರು ಸಿದ್ದರಾಮಯ್ಯ ಎದುರು ವಿ. ಸೋಮಣ್ಣ, ಡಿ.ಕೆ. ಶಿವಕುಮಾರ್ ಎದುರು ಆರ್. ಅಶೋಕ ಅವರನ್ನು ಕಣಕ್ಕೆ ಇಳಿಸಿ, ಪೈಪೋಟಿಗೆ ಸಿದ್ಧ ಎಂಬ ಸಂದೇಶ ರವಾನಿಸಿದರು.
ಕಾಂಗ್ರೆಸ್ ವಿರುದ್ಧ ರಾಜಕಾರಣ ಮಾಡುತ್ತಾ ಬಂದಿದ್ದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ನಾಯಕರ ವಿರುದ್ಧ ಬಂಡೆದ್ದು, ‘ಕೈ’ ಹಿಡಿದಿದ್ದು ರಾಜಕಾರಣದ ತರ್ಕಗಳನ್ನೇ ಬುಡಮೇಲು ಮಾಡಿತು. ಬಿಜೆಪಿಯ ಕೋಮು ರಾಜಕಾರಣದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಧ್ವನಿ ಎತ್ತಿದ್ದ ಶಿವಮೊಗ್ಗದ ಆಯನೂರು ಮಂಜುನಾಥ್, ನಾಮ ಪತ್ರ ಸಲ್ಲಿಕೆಯ ಮುನ್ನಾದಿನ ಜೆಡಿಎಸ್ ಸೇರಿ, ಅಚ್ಚರಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು. ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಅನೇಕರು ಕಾಂಗ್ರೆಸ್, ಜೆಡಿಎಸ್ ಸೇರಿ, ಚುನಾವಣಾ ಕಣದ ಹಣೆಬರಹವನ್ನೇ ಬದಲಾಯಿಸಿದ್ದಾರೆ. ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಜಿಗಿದ ಇವರ ಕಲೆಗಾರಿಕೆಯಿಂದಾಗಿ, ಪೈಪೋಟಿ ಇಲ್ಲದ ಕಡೆ ಸ್ಪರ್ಧೆ ಉಂಟಾದಂತಾಗಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಅನೇಕರು ಜೆಡಿಎಸ್ ಮೊರೆ ಹೋಗಿದ್ದರೆ, ಕೆಲವೇ ಮಂದಿ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ.
ಟಿಕೆಟ್ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಮತ್ತು ಅವರ ಬೆಂಬಲಕ್ಕೆ ನಿಂತಿದ್ದ ಸಂಸದ ಪ್ರಜ್ವಲ್ ರೇವಣ್ಣ, ಹಾಸನದ ಎಚ್.ಪಿ. ಸ್ವರೂಪ್ ಪರ ಪ್ರಚಾರ ನಡೆಸಿದ್ದಾರೆ.
ಬಂಡಾಯ ಶಮನಕ್ಕೆ ಸಂತೋಷ್ ಅಖಾಡಕ್ಕೆ
ಬೆಳಗಾವಿ: ಬಿಜೆಪಿ ಟಿಕೆಟ್ ಸಿಗದ ಕಾರಣ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಉಂಟಾಗಿರುವ ಬಂಡಾಯ ಶಮನ ಮಾಡಲು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬುಧವಾರ ಕೊನೆಯ ಕಸರತ್ತು ನಡೆಸಿದರು.
ನಗರದ ಸಂಕಮ್ ಹೋಟೆಲ್‌ನಲ್ಲಿ ಬೆಳಿಗ್ಗೆಯಿಂದಲೇ ಅತೃಪ್ತರು ಹಾಗೂ ಬಂಡಾಯ ಎದ್ದಿರುವ ಮುಖಂಡರ ಸಭೆಯಲ್ಲಿ ಅವರು ಪಾಲ್ಗೊಂಡರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹಾಗೂ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಬಂಡಾಯದಿಂದ ಹಿಂದಕ್ಕೆ ಸರಿಯುವುದು ಬಹುತೇಕ ಖಚಿತ ವಾಗಿದೆ. ಅನಿಲ ಬೆನಕೆ ಅವರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಮಹಾದೇವಪ್ಪ ಯಾದವಾಡ ಬಂಡಾಯ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ್ದರೂ, ಇನ್ನೊಂದು ಸುತ್ತು ನಾಯಕರೊಂದಿಗೆ ಮಾತನಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಬೆಳಗಾವಿ ಗ್ರಾಮೀಣ, ಖಾನಾ ಪುರ, ಸವದತ್ತಿ ಕ್ಷೇತ್ರಗಳಲ್ಲಿ ಬಂಡಾಯ ಶಮನವಾಗಿದೆ. ಬೈಲಹೊಂಗಲದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಬುಧವಾರ ಬೃಹತ್ ಮೆರವಣಿಗೆ ಮೂಲಕ ಬಂಡಾಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅವರೊಂದಿಗೂ ಸಂತೋಷ್ ವೈಯಕ್ತಿಕವಾಗಿ ಚರ್ಚೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲಾಡ್, ಆಯನೂರ್‌ಗೆ ಜೆಡಿಎಸ್ ಟಿಕೆಟ್
ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿರುವ ಜೆಡಿಎಸ್, ಕೊನೆಯ ಕ್ಷಣಗಳಲ್ಲಿ ಪಕ್ಷಾಂತರ ಮಾಡಿದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಮಾಜಿ ಶಾಸಕರಾದ ಅನಿಲ್ ಲಾಡ್, ನೇಮಿರಾಜ ನಾಯ್ಕ್ ಅವರಿಗೆ ಟಿಕೆಟ್ ನೀಡಿದೆ.
ಶಾಸಕ ಕೆ.ಎಸ್. ಈಶ್ವರಪ್ಪ ವಿರುದ್ಧ ಬಂಡಾಯ ಎದ್ದಿದ್ದ ಆಯನೂರು, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಬುಧವಾರ ಚಿತ್ರದುರ್ಗದಲ್ಲಿ ಜೆಡಿಎಸ್ ಸೇರಿದರು. ಅಲ್ಲಿಯೇ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದ ಬಿ ಫಾರಂ ನೀಡಲಾಗಿದೆ. 12 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಜೆಡಿಎಸ್ ಬದಲಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಣಕ್ಕಿಳಿದಿರುವ ವರುಣ ಕ್ಷೇತ್ರದಲ್ಲಿ ಅಭಿಷೇಕ್ ಬದಲಿಗೆ ಮಾಜಿ ಶಾಸಕ ಭಾರತೀ ಶಂಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಳ್ಳಾರಿ ನಗರದಲ್ಲಿ ಅಲ್ಲಾ ಭಕ್ಷಾ ಬದಲಿಗೆ ಅನಿಲ್ ಲಾಡ್, ಹಗರಿಬೊಮ್ಮನಹಳ್ಳಿಯಲ್ಲಿ ನೇಮಿರಾಜ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರ ಬದಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಎಂ.ಪಿ. ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಲಾಗಿದೆ. ಬೀದರ್ ಕ್ಷೇತ್ರದಲ್ಲಿ ರಮೇಶ್ ಪಾಟೀಲ್ ಸೋಲಾಪುರ ಬದಲಿಗೆ ಸೂರ್ಯಕಾಂತ ನಾಗಮಾರಪಲ್ಲಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಮತ್ತು ಅರಸೀಕೆರೆಯಲ್ಲಿ ಬಿಜೆಪಿ ತೊರೆದು ಬಂದಿರುವ ಎನ್.ಆರ್. ಸಂತೋಷ್ ಅವರನ್ನು ಕಣಕ್ಕಿಳಿಸಲಾಗಿದೆ.
ಏಳು ಕ್ಷೇತ್ರಗಳಲ್ಲಿ ಬೆಂಬಲ: ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್. ಧ್ರುವನಾರಾಯಣ ಅವರ ಮಗ ದರ್ಶನ್ ಧ್ರುವನಾರಾಯಣ ಅವರಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ.
ಕಲಬುರಗಿ ಗ್ರಾಮಾಂತರ, ಬಾಗೇಪಲ್ಲಿ, ಕೆ.ಆರ್.ಪುರ ಕ್ಷೇತ್ರಗಳಲ್ಲಿ ಸಿಪಿಎಂ ಅಭ್ಯರ್ಥಿಗಳಿಗೆ ಹಾಗೂ ಸಿ.ವಿ. ರಾಮನ್ ನಗರ, ವಿಜಯನಗರ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ಆರ್‌ಪಿಐ ಅಭ್ಯರ್ಥಿಗಳಿಗೆ ಬೆಂಬಲ ಪ್ರಕಟಿಸಿದೆ.
ಶಿವಮೊಗ್ಗಕ್ಕೆ ಚನ್ನಬಸಪ್ಪ, ಮಾನ್ವಿಗೆ ನಾಯಕ
ನವದೆಹಲಿ: ಬಿಜೆಪಿಯ ಕೊನೆಯ ಎರಡು ಕ್ಷೇತ್ರಗಳ ಅಭ್ಯರ್ಥಿಗಳು ಘೋಷಣೆಯಾಗಿದ್ದು, ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಚನ್ನಬಸಪ್ಪ ಮತ್ತು ಮಾನ್ವಿ (ಎಸ್‌ಸಿ) ಕ್ಷೇತ್ರಕ್ಕೆ ಬಿ.ವಿ.ನಾಯಕ ಅವರು ಉಮೇದುವಾರರಾಗಿದ್ದಾರೆ. ಶಿವಮೊಗ್ಗ ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸುತ್ತಿದ್ದ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ