ಹುಬ್ಬಳ್ಳಿ: ಬಿಜೆಪಿಯಲ್ಲಿ ನನಗೆ ಅವಕಾಶ ಸಿಕ್ಕಾಗ ಒಳ್ಲೆಯ ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುವವರೆಗೆ ಸುಮ್ಮನಿದ್ದೆ. ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪಕ್ಷದಿಂದ ಹೊರ ಬರುವಂತೆ ಮಾಡಿದರು. ಅವರು ಯಾರು ಎಂಬುದನ್ನು ಬಹಿರಂಗಪಡಿಸುವ ಸಮಯ ಈಗ ಬಂದಿದೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ನಾನು ಮಂತ್ರಿಯಾಗಲಿಲ್ಲ. ಜಗದೀಶ್ ಶೆಟ್ಟರ್ ಅವಕಾಶವಾಧಿ ರಾಜಕಾರಣಿ ಎಂದು ಮಾತನಾಡುತ್ತಾರೆ. ನನಗೆ ಅಧಿಕಾರದ ಆಸೆ ಇದ್ದರೆ ನಾನು ಮಂತ್ರಿಯಾಗುತ್ತಿದ್ದೆ. ಅವಕಾಶವಿದ್ದರೂ ನಾನೆ ನಿರಾಕರಿಸಿದೆ. ನನಗೆ ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಭಾಗಗಳ ಜವಾಬ್ದಾರಿ ಕೊಟ್ಟರು. ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ರೈತರ ಸಾಲ ಮನ್ನಾ ಮಾಡಿದೆ. ದಿನಗೂಲಿ ನೌಕರರನ್ನು ಖಾಯಂ ಮಾಡಿದ್ದೇನೆ. ಜನರು ಇಂದಿಗೂ ಜಗದೀಶ್ ಶೆಟ್ಟರ್ ನಿಮ್ಮಿಂದ ನಮಗೆ ಸಹಾಯವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಒಬ್ಬ ನಿಷ್ಠಾವಂತ, ಪ್ರಾಮಾಣಿಕವಾಗಿ ಕೆಲಸ ಮಾಡಿದ ಉತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದ ವ್ಯಕ್ತಿಗೆ ಬಿಜೆಪಿ ಅಪಮಾನ ಮಾಡಿದೆ. ಕೊನೆವರೆಗೂ ಟಿಕೆಟ್ ನೀಡುವ ಭರವಸೆ ನೀಡಿ ಕೊನೇಕ್ಷಣದಲ್ಲಿ ಕೇವಲ ಫೋನ್ ಕಾಲ್ ಮಾಡಿ ನಿಮಗೆ ಟಿಕೆಟ್ ಇಲ್ಲ ಎನ್ನುತ್ತಾರೆ. ಸ್ಕ್ರೀನಿಂಗ್ ಕಮಿಟಿಯಲ್ಲಿಯೂ ನನ್ನ ಹೆಸರಿತ್ತು. ಆದರೆ ನನಗೆ ಟಿಕೆಟ್ ಕೈತಪ್ಪಲು ಷಡ್ಯಂತ್ರ ಮಾಡಿದ್ದಾರೆ. ನನಗೆ ಬಿಜೆಪಿ ಟಿಕೆಟ್ ಸಿಗದಿರಲು ಬಿ.ಎಲ್.ಸಂತೋಷ್ ಕಾರಣ ಎಂದು ಆರೋಪಿಸಿದರು.