ಧಾರವಾಡ, ಏಪ್ರಿಲ್ 17; ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಧಾರವಾಡ ಜಿಲ್ಲೆಯ ಮತ್ತೊಬ್ಬ ನಾಯಕ ಶೆಟ್ಟರ್ ಹಾದಿ ತುಳಿದಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಧಾರವಾಡಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಎಸ್. ಐ. ಚಿಕ್ಕನಗೌಡ್ರ ಸೋಮವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಅವರು ರಾಜೀನಾಮೆ ಪತ್ರವನ್ನು ರವಾನೆ ಮಾಡಿದ್ದಾರೆ.
ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಅವರು, ‘ಕಳೆದ ಕೆಲ ದಿನಗಳ ರಾಜಕೀಯ ವಿದ್ಯಮಾನಗಳಿಂದ ಬೇಸರಗೊಂಡು ಭಾರತೀಯ ಜನತಾ ಪಕ್ಷದ ನನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು, ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳ ಆಶಯದಂತೆ ಕುಂದಗೋಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನನ್ನೊಂದಿಗೆ ಇರುವುದೆಂಬ ನಂಬಿಕೆಯಿದೆ’ ಎಂದು ಹೇಳಿದ್ದಾರೆ.
ಈ ಬಾರಿಯವಿಧಾನಸಭೆ ಚುನಾವಣೆಗೆ ಎಸ್. ಐ. ಚಿಕ್ಕನಗೌಡ್ರ ಕುಂದಗೋಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಎಂ. ಆರ್. ಪಾಟೀಲ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಟಿಕೆಟ್ ಕೈತಪ್ಪಿದ ಬಳಿಕ ಅಸಮಾಧಾನಗೊಂಡಿದ್ದ ಅವರು, ಹಿತೈಷಿಗಳು, ಅಭಿಮಾನಿಗಳ ಜೊತೆ ಚರ್ಚೆ ಮಾಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರುಕಾಂಗ್ರೆಸ್ಸೇರಲಿದ್ದಾರೆ ಎಂಬ ಸುದ್ದಿಗಳು ಹುಸಿಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವಾಗಿ ಘೋಷಣೆ ಮಾಡಿದ್ದಾರೆ.
ಚುನಾವಣಾ ಫಲಿತಾಂಶದ ಮಾಹಿತಿ ಎಸ್. ಐ. ಚಿಕ್ಕನಗೌಡ್ರ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಂದಗೋಳದಲ್ಲಿ ಕಣಕ್ಕಿಳಿದಿದ್ದರು 43,307 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ 2013ರ ಚುನಾವಣೆಯಲ್ಲಿಯೂ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. 31,618 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಿ. ಎಸ್. ಶಿವಳ್ಳಿ ವಿರುದ್ಧ ಸೋಲು ಕಂಡಿದ್ದರು.
ಕಾಂಗ್ರೆಸ್ ಶಾಸಕ ಸಿ. ಎಸ್. ಶಿವಳ್ಳಿ ಅಕಾಲಿಕ ನಿಧನದಿಂದಾಗಿ ಕುಂದಗೋಳಕ್ಕೆ 2019ರಲ್ಲಿ ಉಪ ಚುನಾವಣೆ ಎದುರಾಯಿತು. ಆಗಬಿಜೆಪಿಎಸ್. ಐ. ಚಿಕ್ಕನಗೌಡ್ರಗೆ ಮತ್ತೆ ಟಿಕೆಟ್ ನೀಡಿತು. ಆಗ ಅವರು 75,976 ಮತಗಳನ್ನು ಪಡೆದು ಸೋಲು ಕಂಡರು. ಸಿ. ಎಸ್. ಶಿವಳ್ಳಿ ಅವರ ಸಾವಿನ ಅನುಕಂಪ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ. ಎಸ್. ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಜಯಗಳಿಸಿದ್ದರು.
2013, 2018 ಮತ್ತು 2019 ಉಪ ಚುನಾವಣೆ ಸೋಲಿನ ಬಳಿಕವೂ ಎಸ್. ಐ. ಚಿಕ್ಕನಗೌಡ್ರ ಮೇ 10ರಂದು ನಡೆಯುವ ಈ ಬಾರಿಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಒಂದು ವೇಳೆ ತಮಗೆ ಟಿಕೆಟ್ ನೀಡದಿದ್ದರೆ ತಮ್ಮ ಕುಟುಂಬದ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಪಕ್ಷದ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ಚುನಾವಣಾ ಟಿಕೆಟ್ ಕೈತಪ್ಪಿತ್ತು.
ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ ಕುಂದಗೋಳ ಕ್ಷೇತ್ರದಲ್ಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಬಾರದು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ತನ್ನ 3ನೇ ಪಟ್ಟಿಯಲ್ಲಿ ಕಾಂಗ್ರೆಸ್ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಚಿಕ್ಕನಗೌಡ್ರ ಮತ್ತು ಕುಸುಮಾ ಶಿವಳ್ಳಿ ಎದುರಾಳಿಯಾಗುತ್ತಿದ್ದಾರೆ.