ಬೆಂಗಳೂರು: ‘ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಈ ಇಬ್ಬರ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸತ್ಯ ಸಂಗತಿ ಮನವರಿಕೆ ಮಾಡುತ್ತೇನೆ. ಪಕ್ಷವನ್ನು ಗೆಲ್ಲಿಸುತ್ತೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಇಬ್ಬರ ವಿರುದ್ಧವೂ ಹರಿಹಾಯ್ದರು. ಕೇಂದ್ರದಲ್ಲಿ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡುತ್ತೇವೆ ಎಂದು ವರಿಷ್ಠರು ಹೇಳಿದ್ದರೂ ಶೆಟ್ಟರ್ ಕೇಳಿಲ್ಲ’ ಎಂದು ದೂರಿದರು.
‘ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಸ್ಥಾನ ನೀಡಿತ್ತು. ಬಿ.ಬಿ.ಶಿವಪ್ಪ ಅವರನ್ನೂ ಎದುರು ಹಾಕಿಕೊಂಡು ವಿರೋಧಪಕ್ಷದ ನಾಯಕರಾಗಿ ಮಾಡಲಾಯಿತು. ನಾನು, ಅನಂತಕುಮಾರ್ ಅವರು ಶೆಟ್ಟರ್ ಪರವಾಗಿ ನಿಂತು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿ. ವಿಶ್ವದಲ್ಲಿ ಭಾರತಕ್ಕೆ ಗೌರವ ಸ್ಥಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಶೆಟ್ಟರ್ ನಮ್ಮ ವಿಚಾರಧಾರೆಗೆ ತದ್ವಿರುದ್ಧ
ವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಯಾವುದೇ ಸ್ಥಾನ ಸಿಗದಿದ್ದರೂ ದೇಶಕ್ಕಾಗಿ, ಪಕ್ಷಕ್ಕಾಗಿ ಶ್ರಮಿಸಬೇಕಿದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ಪಕ್ಷದ ಬೆಂಬಲವಿಲ್ಲದೇ ಎತ್ತರಕ್ಕೇರಲು
ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿ ಅಲಂಕರಿಸಲು ಸಾಧ್ಯವಿಲ್ಲ’ ಎಂದರು.
‘ಲಕ್ಷ್ಮಣ ಸವದಿ ಅವರನ್ನು ಶಾಸಕ, ಸಚಿವರನ್ನಾಗಿ ಮಾಡಲಾಗಿತ್ತು. ಚುನಾವಣೆಯಲ್ಲಿ ಸೋತಿದ್ದರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಉಪಮುಖ್ಯಮಂತ್ರಿ ಮಾಡಲಾಗಿತ್ತು. ಪಕ್ಷದಲ್ಲಿ ಇದ್ದರೆ ಉತ್ತಮ ಅವಕಾಶಗಳು ಸಿಗುತ್ತಿತ್ತು. ಸವದಿಗೆ ಪಕ್ಷದಿಂದ ಅನ್ಯಾಯ ಆಗಿಲ್ಲ. ಕಾಂಗ್ರೆಸ್ ಸೇರಿ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ’ ಎಂದು ಯಡಿಯೂರಪ್ಪ ಅವರು ಹರಿಹಾಯ್ದರು.
ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಇದ್ದರು.
‘ಕೆಜೆಪಿ ಕಟ್ಟಿದ್ದು ಅಕ್ಷಮ್ಯ’
ಬೆಂಗಳೂರು: ‘ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದು ನನ್ನ ಬದುಕಿನಲ್ಲಿ ಮಾಡಿದ ಅಕ್ಷಮ್ಯ ಅಪರಾಧ. ಈ ಕುರಿತು ನಾನು ಹಿಂದೆ ಜನರಲ್ಲಿ ಕ್ಷಮೆ ಕೇಳಿದ್ದೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
‘ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಲಿಲ್ಲವೇ’ ಎಂದು ಜಗದೀಶ ಶೆಟ್ಟರ್ ಅವರು ಪ್ರಶ್ನಿಸಿರುವ ಬೆನ್ನಲ್ಲೇ ಬಿಎಸ್‌ವೈ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಜೆಪಿ ಬಿಟ್ಟಿರುವ ಶೆಟ್ಟರ್ ಅವರನ್ನು ಜನ ಕ್ಷಮಿಸುವುದಿಲ್ಲ. ಅವರ ಜತೆ ಎರಡು ಮೂರು ಬಾರಿ ಮಾತನಾಡಿದ್ದೆ. ಯಾರೇ ಪಕ್ಷ ಬಿಟ್ಟರೂ ನಮಗೆ ಸಮಸ್ಯೆ ಆಗುವುದಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಇವರ ಬಣ್ಣ ಬಯಲು ಮಾಡುತ್ತೇನೆ’ ಎಂದು ಕಿಡಿ ಕಾರಿದರು.
‘ನಾನು ಸ್ವಇಚ್ಛೆಯಿಂದ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ. ಈಶ್ವರಪ್ಪ, ಅಂಗಾರ, ರಘುಪತಿ ಭಟ್ ಪಕ್ಷದ ತೀರ್ಮಾನ ಗೌರವಿಸಿದ್ದಾರೆ. ಶೆಟ್ಟರ್, ತಮ್ಮ ತಪ್ಪಿನ ಅರಿವಾಗಿ ಪಕ್ಷಕ್ಕೆ ಬರುವುದಾದರೆ, ವಾಪಸು
ಸೇರಿಸಿಕೊಳ್ಳಲಾಗುವುದು’ ಎಂದೂ ಹೇಳಿದರು.