ಬೆಂಗಳೂರು – ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದಕ್ಕೆ ಮುಹೂರ್ತ ಫಿಕ್ಸ ಆಗಿದೆ. ಇಂದು ಸಂಜೆ 4.30ಕ್ಕೆ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ.
ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಚರ್ಚೆಯ ಬಳಿಕ ಲಕ್ಷ್ಮಣ ಸವದಿ ಉಪಸ್ಥಿತಿಯಲ್ಲಿ ಶಿವಕುಮಾರ ಈ ಕುರಿತು ಮಾಹಿತಿ ನೀಡಿದರು. ಲಕ್ಷ್ಮಣ ಸವದಿ ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಸೇರಲು ಒಪ್ಪಿದ್ದಾರೆ. ಅವರು ಇಂದು ಸಂಜೆ 4.30ಕ್ಕೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ಲಕ್ಷ್ಮಣ ಸವದಿ, ನಾನು ಅಥಣಿಯಿಂದ ಸ್ಪರ್ಧಿಸುವ ಮತ್ತು ಕಾಂಗ್ರೆಸ್ ಸರಕಾರ ಬಂದ ನಂತರ ಅಥಣಿ ಕ್ಷೇತ್ರದಲ್ಲಿನ ನೀರಾವರಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಷರತ್ತುಗಳನ್ನು ಮಾತ್ರ ಹಾಕಿದ್ದೇನೆ. ನಾನು ಕಾಂಗ್ರೆಸ್ ಸೇರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೋವಾಗಿದ್ದರೆ ಸಾಂತ್ವನ ಹೇಳುತ್ತೇನೆ ಎಂದರು.
ಇಂದು ಸಂಜೆಯೇ ಕಾಂಗ್ರೆಸ್ ಸೇರುತ್ತೇನೆ. ನಿನ್ನೆ ಅಥಣಿ ಕ್ಷೇತ್ರದ 30 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು ನನಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದಿದ್ದರು. ಹಾಗಾಗಿ ಇಂದು ಸುದೀರ್ಘ ಚರ್ಚೆಯ ಬಳಿಕ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
Laxmi News 24×7