ಚಿತ್ರದುರ್ಗ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರ ಮೇಲಿನ ದೋಷಾರೋಪವನ್ನು ಜಿಲ್ಲಾ ನ್ಯಾಯಾಲಯ ಗುರುವಾರ ನಿಗದಿಪಡಿಸಿತು.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡು ದೋಷಾರೋಪ ಪಟ್ಟಿಗಳ ಪೈಕಿ ಒಂದರಲ್ಲಿನ ದೋಷಾರೋಪವನ್ನು ನಿಗದಿಪಡಿಸಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಯಿತು. ಕಲಾಪದ ಅವಧಿ ಮುಕ್ತಾಯಗೊಂಡಿದ್ದರಿಂದ ಮತ್ತೊಂದು ದೋಷಾರೋಪ ಪಟ್ಟಿಯ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿ 2ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಕೋಮಲಾ ಆದೇಶಿಸಿದರು.
ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಳೆದ ಅಕ್ಟೋಬರ್ 27ರಂದು ದೋಷಾರೋಪಪಟ್ಟಿ ಸಲ್ಲಿಸಿದ್ದರು. ಶಿವಮೂರ್ತಿ ಶರಣರು, ಹಾಸ್ಟೆಲ್‌ನ ಮಹಿಳಾ ವಾರ್ಡ್ ಹಾಗೂ ಮಠದ ವ್ಯವಸ್ಥಾಪಕರಾಗಿದ್ದ ಪರಮಶಿವಯ್ಯ ವಿರುದ್ಧ ದೋಷಾರೋಪ ಮಾಡಲಾಗಿತ್ತು. ಈ ಮೂವರ ವಿರುದ್ಧವೂ ದೋಷಾರೋಪ ನಿಗದಿಯಾಗಿದೆ.