ಬೆಳಗಾವಿ : ಹಿರೇಬಾಗೇವಾಡಿ ಚೆಕ್ ಪೋಸ್ಟ್ ಬಳಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ ಬೆಳ್ಳಿ ವಶಕ್ಕೆ ಪಡೆಯುವ ಮುಂಚೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಚಹಾ ತಡವಾಗಿ ಕೊಟ್ಟಿದ್ದಕ್ಕಾಗಿ ಅಂಗಡಿ ಮಾಲೀಕನ ಜೊತೆಗೆ ಮೂವರು ಆರೋಪಿಗಳು ಗಲಾಟೆ ಮಾಡಿಕೊಂಡಿದ್ದಾರೆ. ಮೂವರು ಸೇರಿಕೊಂಡು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇದನ್ನು ಕಂಡ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹಿರೇಬಾಗೇವಾಡಿ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿದರು.
ಈ ವೇಳೆ ಕಾರು ತಪಾಸಣೆ ಮಾಡಿದಾಗ, 9,87,770 ರೂ. ಮೌಲ್ಯದ 14 ಕೆಜಿ, 111 ಗ್ರಾಂ ಬೆಳ್ಳಿ ಆಭರಣಗಳು ಇರುವುದು ಪತ್ತೆಯಾಗಿದೆ.
ಮಹಾರಾಷ್ಟ್ರದ ಉಪರಿಯಿಂದ ಹುಬ್ಬಳ್ಳಿಗೆ ಸೂಕ್ತ ದಾಖಲೆ ಇಲ್ಲದೇ ಆಭರಣಗಳನ್ನು ಸಾಗಿಸಲಾಗಿತ್ತು. ಬೆಳ್ಳಿ ಆಭರಣಗಳ ಜೊತೆಗೆ ಮೂವರು ಆರೋಪಿಗಳನ್ನು ಬಂಧಿಸಿರುವ ಹಿರೇಬಾಗೇವಾಡಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.