ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ತಾಯಿ – ಮಗ: ಚುನಾವಣೆಗೆ ಸ್ಪರ್ಧಿಸಲು ಸೌರಭ್​ ಚೋಪ್ರಾ ತೀರ್ಮಾನ

Spread the love

ಬೆಳಗಾವಿ: ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಬಂಡಾಯದ ಬಿಸಿ ತಟ್ಟಿದೆ.

ಟಿಕೆಟ್ ವಂಚಿತ ಸೌರಭ್​ ಚೋಪ್ರಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ನಿನ್ನೆ ಸವದತ್ತಿಯಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಸಾವಿರಾರು ಬೆಂಬಲಿಗರು ಭಾಗಿಯಾಗಿದ್ದರು. ಈ ವೇಳೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರ‌ ಮುಂದೆ ತಾಯಿ ಕಾಂತಾದೇವಿ ಮತ್ತು ಸೌರಭ ಚೋಪ್ರಾ ಕಣ್ಣೀರು ಹಾಕಿದರು‌.

ಸಭೆಯಲ್ಲಿ ಮತದಾರರ ಬಳಿ ಮನವಿ ಮಾಡಿಕೊಂಡ ಸೌರಭ್ ಚೋಪ್ರಾ ತಾಯಿ ಕಾಂತಾದೇವಿ, ನನ್ನ ಗಂಡನನ್ನು ಕಳೆದುಕೊಂಡಿದ್ದೇನೆ, ಈಗ ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ. ನೀವೇನು ಮಾಡುತ್ತೀರಿ ನಿಮಗೆ ಬಿಟ್ಟದ್ದು ಎಂದು ಭಾವುಕರಾಗಿ ಮಾತನಾಡಿದರು. ಬಳಿಕ ಮಾತನಾಡಿದ ಅಭಿಮಾನಿಗಳು, ನಾವು 40 ವರ್ಷದಿಂದ ಆನಂದ್​ ಚೋಪ್ರಾ ಅವರ ಜೊತೆಗಿದ್ದೇವೆ. ನಾವೂ ಯಾರೂ ಹಣಕ್ಕೆ ಮತ್ತೊಂದಕ್ಕೆ ಆಸೆ ಪಡುವವರಲ್ಲ. ನಿಮ್ಮ ಜೊತೆ ನಾವಿರುತ್ತೇವೆ. ನೀವು ಯಾವುದಕ್ಕೂ‌ ಹೆದರುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.

ಸೌರಭ್​ ಚೋಪ್ರಾ ಮಾತನಾಡಿ, ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಮಾತ್ರ ಸ್ಪರ್ಧಿಸುತ್ತೇನೆ, ಟಿಕೆಟ್ ಸಿಗದಿದ್ದರೆ ನಿಲ್ಲುವುದಿಲ್ಲ ಎಂದು ಈ ಹಿಂದೆ ಹೇಳಿದ್ದೆ. ಆದರೆ, ಅಪಾರ ಸಂಖ್ಯೆಯಲ್ಲಿ ಕ್ಷೇತ್ರದ ಜನರು ಬಂದು ನೀವು ಸ್ಪರ್ಧೆ ಮಾಡಲೇಬೇಕು, ನಿಮ್ಮನ್ನು ನಾವು ಬಿಟ್ಟು ಕೊಡಲ್ಲ ಎಂದು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇನೆ. ಕೊನೆಯ ಉಸಿರು ಇರೋ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

2013, 2018 ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಈ ಬಾರಿ ಖಂಡಿತವಾಗಿ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸವಿತ್ತು. ಮತ್ತೆ ಟಿಕೆಟ್ ಸಿಗದಿರುವುದು ಕಾರ್ಯಕರ್ತರಿಗೆ ಬಹಳಷ್ಟು ನೋವು ಮತ್ತು ಅಸಮಾಧಾನ ತಂದಿದೆ. ಸವದತ್ತಿ ತಾಲೂಕಿನ ಯಾವುದೇ ಹಳ್ಳಿಗೆ ಹೋದರೂ ಚಿಕ್ಕ ಹುಡುಗನೂ ಹೇಳುತ್ತಾನೆ, ಚೋಪ್ರಾ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಆಗುತ್ತಿತ್ತು ಎಂದು. ನಮ್ಮ ತಂದೆ ಏನು ಕೆಲಸ ಮಾಡಿದ್ದರು, ಅದನ್ನು ನಾನು ಹಾಗೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಇದೆಲ್ಲಾ ಗೊತ್ತಿದ್ದು, ಪಕ್ಷ ಯಾವ ಬೇಸ್ ಮೇಲೆ ಈ ರೀತಿ ತೀರ್ಮಾನ ತೆಗೆದುಕೊಂಡಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ