ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಮದರಿ ಹತ್ತಿರ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಯ ಮೇಲೆ ಚುನಾವಣಾ ಅಧಿಕಾರಿಗಳು ಇಂದು ರಾತ್ರಿ ಎರಡನೇ ಬಾರಿ ದಾಳಿ ನಡೆಸಿದ್ದು ದಾಳಿಯ ವೇಳೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ, ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಎಸ್.ಆರ್.ಪಾಟೀಲ ಅವರಿಗೆ ಸೇರಿದ ಗೋಡೆ ಗಡಿಯಾರ, ಟೀಶರ್ಟ್ ಸೇರಿ ಅಂದಾಜು 40-50 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಸೀಜ್ ಮಾಡಲಾಗಿದೆ.
ಮಾ.27 ಮತ್ತು 28ರಂದು ಎರಡು ದಿನಗಳವರೆಗೆ ಮೊದಲ ಬಾರಿ ದಾಳಿ ನಡೆಸಿದ್ದ ಚುನಾವಣಾಧಿಕಾರಿಗಳ ತಂಡ ಅಲ್ಲಿ ಸಂಗ್ರಹಿಸಿ ಇಟ್ಟಿದ್ದ ಎಸ್.ಆರ್.ಪಾಟೀಲರ ಭಾವಚಿತ್ರ ಇರುವ ಗಡಿಯಾರ, ಎಸ್‌ಆರ್ಪಿ ಎಂದು ಬರೆದ ಟೀಶರ್ಟ್ ಸೇರಿ ಅಂದಾಜು 2.10 ಕೋಟಿ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಮೊದಲನೇಯದ್ದು ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ನಡೆದ ದಾಳಿಯಾಗಿದ್ದರೆ ಇಂದಿನದ್ದು ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ನಡೆಯುತ್ತಿರುವ ದಾಳಿ ಆಗಿದೆ.
ಸ್ಥಳಕ್ಕೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ವಿಜಯಪುರ ಜಿಲ್ಲಾಧಿಕಾರಿ ಡಾ| ವಿ.ಬಿ.ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಸ್ಥಾಧಿಕಾರಿ ಎಚ್.ಡಿ.ಆನಂದಕುಮಾರ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, .ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾಂತ ಪವಾರ, ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಖಾ ಭೇಟಿ ನೀಡಿ ಪರಿಶೀಲಿಸಿ ಸಲಹೆ ಸೂಚನೆ ನೀಡಿದ್ದಾರೆ. ಪಿಎಸೈ ಆರೀಫ್ ಮುಷಾಪುರಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಇತ್ತ ಬಾಗಲಕೋಟೆ ಚಕ್ಪೋಸ್ಟನಲ್ಲಿ ಇದೇ ಕಾರ್ಖಾನೆಯಿಂದ ಎಸ್.ಆರ್.ಪಾಟೀಲ ಅವರಿಗೆ ಸೇರಿದ ಸಾಮಗ್ರಿ ತುಂಬಿದ ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಡೀ ರಾತ್ರಿ ಕಾರ್ಖಾನೆಯಲ್ಲಿ ಕಾರ್ಯಾಚರಣೆ ನಡೆಯಲಿದೆ.