ಬೆಂಗಳೂರು: ನಂಬಿಕೆಗೆ ಮತ್ತೊಂದು ಸಮಾಜ ಎಂದರೆ ತಿಗಳರ ಸಮಾಜ, ಸೂರ್ಯ ಹಾಗೂ ಅಗ್ನಿಯಿಂದ ಉದ್ಭವಿಸಿದ ಸಮಾಜ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಿಗಳರ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಸಮಾಜದ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಿ ಇಲ್ಲಿಗೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಕೂಡ ಅಷ್ಟೇ ಮುಖ್ಯ. ಈ ದೇಶದಲ್ಲಿ ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು ಸೇರಿದಂತೆ ಎಲ್ಲಾ ಧರ್ಮದವರು ತಮ್ಮ ಆಚರಣೆ ನಂಬಿಕೊಂಡು ಬಂದಿದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂದರು.
ದ್ರೌಪದಿ ಮತ್ತು ಧರ್ಮರಾಯಸ್ವಾಮಿ ಇವರ ಆರಾಧ್ಯ ದೈವ. ನಮ್ಮ ಹಿಂದುತ್ವ ಉಳಿದುಕೊಂಡಿರುವುದೇ ಧರ್ಮರಾಯನ ಧರ್ಮತ್ವದಿಂದ. ನಾನು ಸದನದಲ್ಲಿ ಭಾಷಣ ಮಾಡುತ್ತಾ ಒಬ್ಬ ಮನುಷ್ಯ ಯಶಸ್ಸು ಕಾಣಬೇಕಾದರೆ, ಧರ್ಮರಾಯನ ಧರ್ಮತ್ವ ಇರಬೇಕು, ದಾನಶೂರ ಕರ್ಣದ ಧಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣ ತಂತ್ರ ಇರಬೇಕು ಎಂದು ಹೇಳಿದ್ದೆ.
ನಾವು ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟ ಮಾತು ಉಳಿಸಿಕೊಂಡು ಹೋಗುವುದು ಮುಖ್ಯ. ತಿಗಳರ ಸಮಾಜ ಪಾಂಡವರ ವಂಶಸ್ಥರು ಎಂದು ಹೆಸರು ಬಂದಿದೆ. ಇದು ನಮ್ಮ ಧರ್ಮ ಹಾಗೂ ಸಂಸ್ಕೃತಿಯಲ್ಲಿ ಈ ಸಮಾಜಕ್ಕೆ ಸಿಕ್ಕಿರುವ ಗುರುತು. ಈ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧ ನಡೆಯುವ ಸ್ಥಳ ದೇವಾಲಯ. ನಮಗೂ ಹಾಗೂ ಭಗವಂತನ ಮೂರ್ತಿಯ ನಡುವೆ ಸಂಪರ್ಕವಾಗುವುದು ಪುಷ್ಪ ಹಾಗೂ ತುಳಸಿಯಿಂದ. ಇದನ್ನು ಬೆಳೆಯುವವರು ಈ ಸಮಾಜದವರು ಎಂದರು.