ಹುಬ್ಬಳ್ಳಿ: ವಿಶ್ವದ ಅತೀ ಉದ್ದನೆಯ ರೈಲ್ವೆ ಪ್ಲಾಟ್‌ಫಾರಂ ಹೊಂದಿರುವ ಕೀರ್ತಿ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ್ದಾಗಿದೆ. ಭಾನುವಾರ ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ.
ಮುಂದಿನ 20-30 ವರ್ಷಗಳ ರೈಲ್ವೆ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು 20.01 ಕೋಟಿ ರೂ.ವೆಚ್ಚದಲ್ಲಿ 1,507 ಮೀಟರ್(4938 ಅಡಿ)ಉದ್ದದ ಈ ಪ್ಲಾಟ್‌ಫಾರಂ ನಿರ್ಮಿಸಲಾಗಿದೆ.
ಇದರಿಂದ ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಬಹುದಾಗಿದೆ.
ಹುಬ್ಬಳ್ಳಿ ರೈಲ್ವೆ ಜಂಕ್ಷನ್ ದೇಶದ ಪ್ರಮುಖ ಜಂಕ್ಷನ್‌ಗಳಲ್ಲೊಂದು. ರಾಜ್ಯ-ದೇಶದ ವಿವಿಧೆಡೆ ಸಂಪರ್ಕ ಕಲ್ಪಿಸುವ ನೂರಾರು ರೈಲುಗಳು ಪ್ರತಿನಿತ್ಯ ಈ ಜಂಕ್ಷನ್ ಮೂಲಕ ಹಾದುಹೋಗುತ್ತವೆ. ಪ್ರಮುಖ ಜಂಕ್ಷನ್ ಆಗಿದ್ದರೂ ಹುಬ್ಬಳ್ಳಿಯಲ್ಲಿ ಪ್ಲಾಟ್‌ಫಾರಂ ಕೊರತೆಯಿತ್ತು. ಪ್ಲಾಟ್‌ಫಾರಂನಲ್ಲಿ ಜಾಗವಿಲ್ಲ ಎಂಬ ಕಾರಣಕ್ಕೆ ನಿಲ್ದಾಣದ ಹತ್ತಿರ ಬಂದ ರೈಲುಗಳು ಹೊರವಲಯದಲ್ಲೇ ಕಾಯುವಂತಾಗುತ್ತಿತ್ತು. ಇದ್ದ ರೈಲು ಸಂಚರಿಸಿದ ನಂತರ ನಿಲುಗಡೆಯಾದ ರೈಲು ನಿಲ್ದಾಣ ಪ್ರವೇಶಿಸಬೇಕಿತ್ತು. ಇನ್ನೊಂದೆಡೆ ಪ್ಲಾಟ್‌ಫಾರಂಗಳ ಸಂಖ್ಯೆ ಹೆಚ್ಚಿಸಲು ಜಾಗದ ಕೊರತೆಯಿತ್ತು. ಹೀಗಾಗಿ ಇದ್ದ ಜಾಗದಲ್ಲಿಯೇ ಪ್ಲಾಟ್‌ಫಾರಂ ವಿಸ್ತರಣೆಯ ಚಿಂತನೆ ವಿಶ್ವದ ಅತಿ ಉದ್ದನೆಯ ಪ್ಲಾಟ್‌ಫಾರಂ ನಿರ್ಮಾಣವಾಗುವಂತೆ ಮಾಡಿದೆ.