Breaking News

ರೆಡ್ಡಿ ಅಕ್ರಮ ಹಣ ಗಳಿಕೆ: ವಿದೇಶಿ ಹೂಡಿಕೆ ಮಾಹಿತಿ ಸಂಗ್ರಹಕ್ಕೆ ಕೋರ್ಟ್ ಅಸ್ತು

Spread the love

ಬೆಂಗಳೂರು: ‘ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಗಳಿಸಿದ್ದ ಹಣವನ್ನು ವಿದೇಶಗಳಲ್ಲಿ ಇರಿಸಿದ್ದಾರೆ’ ಎಂಬ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ದಾಖಲೆಗಳನ್ನು ಪಡೆಯಲು ನೆರವಾಗುವಂತೆ ನಾಲ್ಕು ದೇಶಗಳ ಸಕ್ಷಮ ಪ್ರಾಧಿಕಾರಗಳಿಂದ ಮಾಹಿತಿ ಸಂಗ್ರಹಕ್ಕಾಗಿ ಸಿಬಿಐ ಸಲ್ಲಿಸಿದ್ದ ಕೋರಿಕೆಯನ್ನು ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.

 

ಸಿಬಿಐ ಈ ಕುರಿತು ಸಲ್ಲಿಸಿದ್ದ ಮನವಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಇ.ಚಂದ್ರಕಲಾ ಪುರಸ್ಕರಿಸಿದ್ದಾರೆ. ಸ್ವಿಟ್ಜರ್‌ಲೆಂಡ್‌, ಸಿಂಗಪುರ, ಯುಎಇ ಮತ್ತು ಐಲ್ ಆಫ್ ಮ್ಯಾನ್ ದೇಶಗಳ ಸಕ್ಷಮ ಪ್ರಾಧಿಕಾರಗಳಿಂದ ಲಿಖಿತ ಮಾಹಿತಿ ಪಡೆಯುವ ಕೋರಿಕೆಗೆ ಅನುಮತಿ ನೀಡಿದ್ದಾರೆ.

ಜನಾರ್ದನ ರೆಡ್ಡಿ ಹಾಗೂ ಅವರ ಪ‍ತ್ನಿ ಜೆ.ಲಕ್ಷ್ಮಿ ಅರುಣಾ, ನಿವೃತ್ತ ಐಎಎಸ್ ಅಧಿಕಾರಿ ಶಿವಲಿಂಗಮೂರ್ತಿ, ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ, ರೆಡ್ಡಿ ಆಪ್ತರಾಗಿದ್ದ ಕೆ.ಮೆಹಫೂಜ್ ಅಲಿ ಖಾನ್, ಎಸ್.ಪಿ.ರಾಜು, ಮಹೇಶ್ ಎ.ಪಾಟೀಲ ಹಾಗೂ ನಿವೃತ್ತ ವಲಯ ಅರಣ್ಯಾಧಿಕಾರಿ ಎಚ್.ರಾಮಮೂರ್ತಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಸ್ವಿಟ್ಜರ್‌ಲೆಂಡ್‌ನಲ್ಲಿ ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಹಣಕಾಸು ವಿವರ, ಮಾಲೀಕರ ಮಾಹಿತಿ, ಬ್ಯಾಂಕ್ ಖಾತೆಗಳು, ಕಂಪನಿ ಜೊತೆಗೆ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರ ಸಂಪರ್ಕಗಳ ವಿವರ ಕಲೆ ಹಾಕಲು ಸಿಬಿಐ ಮುಂದಾಗಿದ್ದು, ಸಿಆರ್‌ಪಿಸಿ ಕಲಂ 166 (ಎ) ಪ್ರಕಾರ ಈ ಕುರಿತಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

‘ಗಾಲಿ ಜನಾರ್ದನ ರೆಡ್ಡಿ, 2009-2010ರ ಅವಧಿಯಲ್ಲಿ ಸುಮಾರು 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡುವ ಮೂಲಕ ಅಪಾರ ಪ್ರಮಾಣದ ಹಣ ಗಳಿಸಿದ್ದು ಇದರ ಬಹುಪಾಲನ್ನು ವಿವಿಧ ದೇಶಗಳಲ್ಲಿ ಇರಿಸಿದ್ದಾರೆ’ ಎಂಬುದು ಸಿಬಿಐ ಆರೋಪ.

‘ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿರುವ ಕಂಪನಿ ಮತ್ತು ಇದರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕು’ ಎಂದು ಸಿಬಿಐ ಕೋರಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಅಕ್ರಮ ಗಣಿಕಾರಿಕೆ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ