ನೇಸರಗಿ: ಮಿಶ್ರ ಬೇಸಾಯದತ್ತ ಒಲವು ಬೆಳೆಸಿಕೊಂಡ ನೇಸರಗಿ ಹೋಬಳಿ ವ್ಯಾಪ್ತಿಯ ಚಿಕ್ಕಬಾಗೇವಾಡಿ ಗ್ರಾಮದ ರೈತ ಈಶಪ್ರಭು ಬಾಬಾಗೌಡ ಪಾಟೀಲ, ತಮ್ಮ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ‘ಬೆವರು ಹರಿಸಿದರೆ, ಒಕ್ಕಲುತನ ಕೈಹಿಡಿಯುತ್ತದೆ’ ಎಂದು ಸಾರುತ್ತಿದ್ದಾರೆ.
14 ಎಕರೆ ಜಮೀನಿನ ಪೈಕಿ 3 ಎಕರೆಯಲ್ಲಿ ಗೋವಿನಜೋಳ, ಕಡಲೆ, 8 ಎಕರೆ ತೋಟದಲ್ಲಿ ಅಲ್ಫಾನ್ಸೋ ಮಾವು ಬೆಳೆದಿದ್ದಾರೆ. 3 ಎಕರೆಯಲ್ಲಿ ಕಾಜು(ಗೇರು), ಪೇರಲ, ನೆಲ್ಲಿಕಾಯಿ, ಅಂಜೂರ, ದಾಳಿಂಬೆ, ಚಿಕ್ಕು, ಹುಣಸೆ ಬೆಳೆಯಲಾಗಿದೆ.
‘ಒಂದೇ ಬೆಳೆ ನೆಚ್ಚಿಕೊಳ್ಳುವುದ
ಕ್ಕಿಂತ, ಮಿಶ್ರ ಬೇಸಾಯ ಮಾಡುವುದೇ ಉತ್ತಮ. ಒಂದು ಬೆಳೆ ಕೈಕೊಟ್ಟರೂ, ಮತ್ತೊಂದು ಕೈಹಿಡಿಯುತ್ತದೆ. ನಾನೂ ಇದರಲ್ಲಿ ಯಶಸ್ಸು ಕಂಡಿದ್ದೇನೆ. ಸಮಗ್ರ ಕೃಷಿ ಪದ್ಧತಿ ಕೈಗೊಳ್ಳುವಂತೆ ಉಳಿದ ರೈತರಿಗೂ ಮಾರ್ಗದರ್ಶನ ನೀಡುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದು ಕೆ.ಜಿ ಕಾಜು(ಗೇರು) ಬೀಜಕ್ಕೆ ₹120 ದರವಿದೆ. ಒಂದು ಟನ್ ಬೆಳೆದರೆ ₹25 ಸಾವಿರ ಆದಾಯ ಬರುತ್ತದೆ. ಈ ಬಾರಿ ಉತ್ತಮ ಫಸಲು ಬಂದಿರುವುದರಿಂದ ಲಕ್ಷಾಂತರ ರೂ. ಆದಾಯ ಕೈಗೆಟುಕುವ ನಿರೀಕ್ಷೆಯಿದೆ’ ಎಂದರು.
‘ಪ್ರಸ್ತುತ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ನಮ್ಮ ತೋಟದಲ್ಲಿ ಕಟಾವು ಮಾಡಿದ ಮಾವಿನ ಕಾಯಿಯನ್ನು ಧಾರವಾಡ, ಚನ್ನಮ್ಮನ ಕಿತ್ತೂರು ಮಾರುಕಟ್ಟೆಗೆ ಕಳುಹಿಸುತ್ತಿದ್ದೇನೆ. ಮಾವಿನ ಬೆಳೆ ನನ್ನ ಕೈಹಿಡಿಯುತ್ತದೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಅವರು.
ಈಶಪ್ರಭು ತಮ್ಮ ಜಮೀನಿಗೆ ತಿಪ್ಪೆಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಿದೆ.
‘ಇಂದು ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುವುದೇ ಕಷ್ಟ. ಹಾಗಾಗಿ ಕುಟುಂಬದವರೆಲ್ಲ ಸೇರಿಕೊಂಡು ಕೃಷಿ ಮಾಡುವುದು ಉತ್ತಮ’ ಎಂಬುದು ಅವರ ಕಿವಿಮಾತು.
ಜಾನುವಾರುಗಳಿಗೆ ಆಹಾರಕ್ಕಾಗಿ ಫಾರಂಹುಲ್ಲು ಬೆಳೆಯುತ್ತಿದ್ದಾರೆ. ಹಾಲು ಮತ್ತು ತಿಪ್ಪೆಗೊಬ್ಬರಕ್ಕಾಗಿ ಏಳು ಎಮ್ಮೆ ಸಾಕಿದ್ದಾರೆ. ಈಶಪ್ರಭು ಕೃಷಿಯಲ್ಲಿ ಮಾಡಿದ ಸಾಧನೆ ಪರಿಗಣಿಸಿ, ಕೃಷಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸತ್ಕರಿಸಿವೆ.