ಈ ರೈತನಿಗೆ ಐವರು ‘ಹೆಣ್ಣು ಮಕ್ಕಳು’, ಎಲ್ರೂ ‘IAS’ ಅಧಿಕಾರಿಗಳು, ಈ ಸ್ಟೋರಿ ಓದಿ, ನಿಮ್ಗೂ ‘ಸ್ಫೂರ್ತಿ’ ಆಗ್ತಾರೆ
ಮನುಷ್ಯ ಆಕಾಶವನ್ನ ಮುಟ್ಟುತ್ತಿದ್ರೂ, ಸಾಗರದ ಆಳವನ್ನ ಅಳೆಯುತ್ತಿದ್ರೂ, ಅಸಾಧ್ಯವಾದ್ದನ್ನ ಸಾಧ್ಯ ಮಾಡುವತ್ತ ಹೆಜ್ಜೆ ಹಾಕುತ್ತಿದ್ರೂ, ಇಂದಿಗೂ ಹಲವಾರು ಮೂಢ ನಂಬಿಕೆಗಳನ್ನ ನಂಬುತ್ತಾರೆ. ಅದರಲ್ಲೂ ನಮ್ಮ ದೇಶದಲ್ಲಿ ಹುಡುಗಿ ಅಂದ್ರೆ ಮೈನಸ್, ಹುಡುಗ ಪ್ಲೆಸ್ ಎಂಬ ಕಲ್ಪನೆ ಚಾಲ್ತಿಯಲ್ಲಿದೆ.
ಗಂಡು-ಹೆಣ್ಣು ಎಂಬ ಭೇದವಿಲ್ಲ ತಡೆಯಲು ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹಗಳಂತಹ ಕೃತ್ಯಗಳು ನಡೆಯುತ್ತಲೇ ಇವೆ. ಆದ್ರೆ, ಇಲ್ಲೊಂದು ಕುಟುಂಬ ಇದಕ್ಕೆ ವ್ಯತಿರಿಕ್ತವಾಗಿದೆ. ತನ್ನ ಹೆಣ್ಣು ಮಕ್ಕಳನ್ನೇ ಯಾವ ಗಂಡಿಗಿಂತೂ ಕಮ್ಮಿ ಇಲ್ಲದಂತೆ ಬೆಳೆಸಿದ ರೈತನೊಬ್ಬ ಎಲ್ಲರಿಗೂ ಮಾದರಿಯಾಗಿದ್ದಾನೆ.
ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯ ಭೇರುಸಾರಿ ಎಂಬ ಪುಟ್ಟ ಹಳ್ಳಿಯಲ್ಲಿ ಸಹದೇವ್ ಸಹರನ್ ಮತ್ತು ಲಕ್ಷ್ಮಿ ದಂಪತಿಗಗಳಿದ್ದು, ಇವರಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳ ಹೆಸ್ರು ರೋಮಾ, ಮಂಜು, ಅಂಶು, ರಿತು, ಸುಮನ್ ಎಂದು ಹೆಸರಿಸಲಾಗಿದೆ. ತಾಯಿ ಲಕ್ಷ್ಮಿ ವಿದ್ಯಾವಂತಳಲ್ಲ. ಇನ್ನು ತಂದೆ ಸಹದೇವ್ ಕೂಡ ಕೃಷಿಕ.. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ಗ್ರಾಮದಲ್ಲಿ ನಿತ್ಯ ನೀರಿನ ಬವಣೆಯಿದ್ದು, ಎಷ್ಟೇ ದುಡಿದರೂ ಜಮೀನಿನಲ್ಲಿ ಉತ್ತಮ ಇಳುವರಿ ಇಲ್ಲ.
ತನ್ನ ಬಡತನವು ತನ್ನ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂದು ಭಾವಿಸಿದ ಈ ರೈತ, ಮಕ್ಕಳನ್ನ ಶಾಲೆಗೆ ಕಳುಹಿಸಲು ಸಾಧ್ಯವಾಗದಿದ್ದರೂ, ಮನೆಯಲ್ಲಿ ಓದಲು ಮತ್ತು ದೊಡ್ಡ ಕನಸು ಕಾಣುವಂತೆ ಪ್ರೋತ್ಸಾಹಿಸಿದ. ಮೇಲಾಗಿ ಸಹದೇವ್ ತನಗೆ ತನ್ನ ಹೆಣ್ಣುಮಕ್ಕಳನ್ನ ಕಲೆಕ್ಟರ್ ಮಾಡುವ ಆಸೆ ಕಂಡಿದ್ದ.
ಅದ್ರಂತೆ, ಪದವಿಯ ನಂತರ, ರೋಮಾ ರಾಜಸ್ಥಾನ ಆಡಳಿತ ಸೇವೆ (RAS) ಪರೀಕ್ಷೆಗೆ ತಯಾರಿ ನಡೆಸಿದರು. ತಂದೆಯ ಕನಸನ್ನ ನನಸಾಗಿಸುವ ಗುರಿಯೊಂದಿಗೆ ಅವರು ಅಧ್ಯಯನ ಮಾಡಿದರು. 2010 ರಲ್ಲಿ ರೋಮಾ ಅವರ ಕುಟುಂಬದಲ್ಲಿ ಮೊದಲ RAS ಅಧಿಕಾರಿಯಾದರು. ನಂತರ 2017ರಲ್ಲಿ ಮಂಜು ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಇಬ್ಬರು ಹಿರಿಯ ಸಹೋದರಿಯರ ಯಶಸ್ಸಿನಿಂದ ಸ್ಫೂರ್ತಿಗೊಂಡ ಕಿರಿಯ ಸಹೋದರಿಯರಾದ ಅಂಶು, ರಿತು ಮತ್ತು ಸುಮನ್ ಕೂಡ ರಾಜಸ್ಥಾನದ ಆಡಳಿತ ಸೇವೆಗೆ ತಯಾರಿ ಆರಂಭಿಸಿದರು.
2018 ರಲ್ಲಿ RAS ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅಂಶು, ರಿತು ಮತ್ತು ಸುಮನ್ ರಾಜಸ್ಥಾನದ ಆಡಳಿತ ಸೇವೆಗೆ ಏಕಕಾಲದಲ್ಲಿ ಆಯ್ಕೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಸಧ್ಯ ಈ ಸಹೋದರಿಯರು ಜನರ ಗಮನವನ್ನ ತಮ್ಮತ್ತ ತಿರುಗಿಸುವಂತೆ ಮಾಡಿದ್ದಾರೆ. ಪರಿಶ್ರಮ ಮತ್ತು ಕಠಿಣ ಪರಿಶ್ರಮದಿಂದ ಐವರು ಹೆಣ್ಣುಮಕ್ಕಳು ಈಗ ಆರ್‌ಎಎಸ್ ಅಧಿಕಾರಿಗಳಾಗಿ ಜನರ ಸೇವೆ ಮಾಡುತ್ತಿದ್ದಾರೆ.
ಅಪ್ಪನ ಕಷ್ಟ ಅರ್ಥ ಮಾಡಿಕೊಂಡ ಪುತ್ರಿಯರು ಕಲೆಕ್ಟರ್ ಆಗಿ ಆಯ್ಕೆಯಾಗಿ ಅಪ್ಪನ ಮಹತ್ವಾಕಾಂಕ್ಷೆಯನ್ನ ಈಡೇರಿಸಿ ಇತರರಿಗೂ ಮಾದರಿಯಾಗಿದ್ದಾರೆ. ಮೇಲಾಗಿ ತನ್ನ ಹೆಣ್ಣು ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಿದ ತಂದೆ ಸಹದೇವ್ ಕುರಿತು ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.