ಬೆಂಗಳೂರು ಕೇಂದ್ರ ಚುನಾವಣ ಆಯೋಗದ ನಿರ್ದೇಶನದಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮರುಪರಿಶೀಲಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಪ್ರತಿಯೊಂದು ಕ್ಷೇತ್ರ ದಲ್ಲೂ ಅಂದಾಜು 20 ಸಾವಿರ ಹೆಸರುಗಳನ್ನು ಸಕಾರಣವಿಲ್ಲದೆ ತೆಗೆದುಹಾಕಿರುವುದನ್ನು ಪತ್ತೆಹಚ್ಚಿದೆ.
ಅಂತಿಮ ಮತದಾರರ ಪಟ್ಟಿಯಲ್ಲಿ 10 ಸಾವಿರ ಹೆಸರುಗಳು ತೆಗೆದುಹಾಕಿದ್ದರೆ (ಅಂದರೆ ಶೇ.4ಕ್ಕಿಂತ ಅಧಿಕ) ಅಂತಹ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಚುನಾವಣ ಆಯೋಗ ನಿರ್ದೇಶಿಸಿತ್ತು.
ಶೇ.4ಕ್ಕಿಂತ ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿರುವ 170 ವಿಧಾನ ಸಭಾ ಕ್ಷೇತ್ರಗಳನ್ನು ಗುರುತಿಸಲಾಗಿತ್ತು. ಆದರೂ ಎಲ್ಲ 224 ಕ್ಷೇತ್ರಗಳಲ್ಲಿ ಜನವರಿ ತಿಂಗಳಲ್ಲಿ ಅಂತಿಮ ಮತದಾರರ ಪಟ್ಟಿ ಮರುಪರಿಶೀಲಿಸುವ ಅಭಿಯಾನ ವನ್ನು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಹಮ್ಮಿಕೊಂಡಿತ್ತು. ಇದರಲ್ಲಿ ಎಲ್ಲ ಕ್ಷೇತ್ರಗಳಲ್ಲೂ 19,900ಕ್ಕೂ ಅಧಿಕ ಹೆಸರುಗಳನ್ನು ತಪ್ಪಾಗಿ ಕೈಬಿಟ್ಟಿರುವುದು ಪತ್ತೆಯಾಗಿದೆ.
ಆಯೋಗದ ನಿರ್ದೇಶನದಂತೆ ಅಂತಿಮ ಮತದಾರರ ಪಟ್ಟಿಯನ್ನು ಮರುಪರಿಶೀಲಿಸಲು ಜಿಲ್ಲಾ ಚುನಾ ವಣಾಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಅದರಂತೆ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. 224 ಕ್ಷೇತ್ರಗಳ 42 ಸಾವಿರಕ್ಕೂ ಅಧಿಕ ಮತಗಟ್ಟೆಗಳಲ್ಲಿ ತೆಗೆದು ಹಾಕಲಾಗಿದ್ದ 28 ಲಕ್ಷ ಹೆಸರುಗಳ ಪೈಕಿ 3.50 ಲಕ್ಷಕ್ಕೂ ಅಧಿಕ ನಮೂದುಗಳನ್ನು “ಟೇಬಲ್ ಟಾಪ್’ ವಿಧಾನದಡಿ ಪರಿಶೀಲಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.