Breaking News

ಮುಂಬೈನಲ್ಲಿ ಎಂಇಎಸ್‌ ಕಿತಾಪತಿ; ಕರ್ನಾಟಕ ಸರ್ಕಾರದ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರತಿಭಟನೆ

Spread the love

ಬೆಳಗಾವಿ: ಈಗಾಗಲೇ ಎಲ್ಲ ಚುನಾವಣೆಯಲ್ಲಿಯೂ ಸೋತು ಸುಣ್ಣವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಬಾಲ ಬಿಚ್ಚಿದ್ದು, ಕರ್ನಾಟಕದಲ್ಲಿ ಬೇಳೆ ಬೇಯುತ್ತಿಲ್ಲ ಎಂದು ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರದ ಬಾಗಿಲು ತಟ್ಟಿದೆ.

 

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಎಂಇಎಸ್‌ ಗಡಿ ವಿವಾದವನ್ನೇ ಅಸ್ತ್ರವಾಗಿ ಇಟ್ಟುಕೊಂಡು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಂಗಳವಾರ ಆಂದೋಲನ ನಡೆಸಿದೆ. ಬೆಳಗಾವಿಯಲ್ಲಿ ನಾಲ್ಕು ಸ್ಥಾನ ಗೆಲ್ಲಲು ಪ್ಲಾನ್‌ ಮಾಡಿಕೊಂಡು ಮಹಾರಾಷ್ಟ್ರ ಸರ್ಕಾರಕ್ಕೆ ದುಂಬಾಲು ಬಿದ್ದಿದೆ.

ಬೆಳಗಾವಿಯಲ್ಲಿ ಈಗಾಗಲೇ ಎಂಇಎಸ್‌ ತನ್ನ ನೆಲೆ ಕಳೆದುಕೊಂಡಿದೆ. ಇಲ್ಲಿಯ ಮರಾಠಿ ಭಾಷಿಕರು ಸಂಪೂರ್ಣವಾಗಿ ಎಂಇಎಸ್‌ ತಿರಸ್ಕರಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಪಾಲಿಕೆ ಚುನಾವಣೆಯಲ್ಲಿ 58ರ ಪೈಕಿ ಕೇವಲ ಇಬ್ಬರೇ ಸದಸ್ಯರು ಆಯ್ಕೆ ಆಗುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

ಎಂಇಎಸ್‌ ನಾಯಕರು ಮುಂಬೈನಲ್ಲಿ ಧರಣಿ ನಡೆಸುವುದು ಹೊಸತೇನಲ್ಲ. ಅನೇಕ ಸಲ ಮುಂಬೈ, ಕೊಲ್ಲಾಪುರ ಸೇರಿದಂತೆ ಮಹಾರಾಷ್ಟ್ರದಲ್ಲಿ ಪ್ರತಿಭಟನೆ, ಮೋರ್ಚಾ ನಡೆಸಿದೆ. ಒಂದು ಸಲ ಮುಂಬೈನಲ್ಲಿ ಲಾಠಿ ಏಟೂ ತಿಂದಿದ್ದಾರೆ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಎಂಬ ವಚನದಂತೆ ಎಂಇಎಸ್‌ ನಾಯಕರ ಪರಿಸ್ಥಿತಿ ಅಗಿದೆ.

ಬೆನ್ನಿಗೆ ನಿಲ್ಲುವಂತೆ ದುಂಬಾಲು: ಮುಂಬೈನ ಆಜಾದ್‌ ಮೈದಾನದಲ್ಲಿ ಮಂಗಳವಾರ ಪ್ರತಿಭಟನಾ ರ್ಯಾಲಿ ನಡೆಸಿದ ಎಂಇಎಸ್‌ ನಾಯಕರು, ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯ ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ದಬ್ಟಾಳಿಕೆ ನಡೆಸುತ್ತಿದೆ. ಮರಾಠಿ ಭಾಷೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ನಮ್ಮ ಬೆನ್ನಿಗೆ ನಿಲುವಂತೆ ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದೆ ಎಂಇಎಸ್‌ ನಾಯಕರ ನಿಯೋಗ ಮುಂಬೈಗೆ ತೆರಳಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಗಡಿ ಸಮನ್ವಯ ಸಮಿತಿ ಅಧ್ಯಕ್ಷ ಶಂಭುರಾಜ ದೇಸಾಯಿ, ಚಂದ್ರಕಾಂತ ಪಾಟೀಲ, ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಕೇಶ ಕುಮಾರ ಸೇರಿದಂತೆ ಹಲವರನ್ನು ಭೇಟಿಯಾಗಿತ್ತು. ಗಡಿ ವಿವಾದ ವಿಚಾರಣೆ ಬಂದಾಗ ಮಹಾರಾಷ್ಟ್ರ ಪರ ಸಮರ್ಥ ವಾದ ಮಂಡಿಸುವಂತೆ ಮನವಿ ಮಾಡಿತ್ತು.

ಚುನಾವಣೆ ಪ್ರಚಾರಕ್ಕೆ ಸಿಎಂಗೆ ಮನವಿ: ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ ಹಾಗೂ ಖಾನಾಪುರದಲ್ಲಿ ಎಂಇಎಸ್‌ ಬಾವುಟ ಹಾರಿಸಲು ಸಜ್ಜಾಗಿರುವ ಎಂಇಎಸ್‌ ಈ ಚುನಾವಣೆಯಲ್ಲಿ ಸಿಎಂ ಏಕನಾಥ ಶಿಂಧೆ ಅವರನ್ನು ಪ್ರಚಾರಕ್ಕೆ ಕರೆಯಿಸಲು ಸಿದ್ಧತೆ ಮಾಡಿಕೊಂಡಿದೆ. ಮಹಾರಾಷ್ಟ್ರ ಸರ್ಕಾರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ ಅವರು ಆಂದೋಲನ ಸ್ಥಳಕ್ಕೆ ಆಗಮಿಸಿ, ಕರ್ನಾಟಕದಲ್ಲಿರುವ 848 ಹಳ್ಳಿಗಳಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಬಗ್ಗೆ ಬೆಳಗಾವಿಯ ಗಡಿಯಲ್ಲಿರುವ ಚಂದಗಡದಲ್ಲಿ ಸಮನ್ವಯ ಕಚೇರಿ ತೆರೆದು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷಿಕರ ಪರ ಇದೆ ಎಂದು ಬೆಂಬಲ ಸೂಚಿಸಿದ್ದಾರೆ.

ಎಂಇಎಸ್‌ ಬೆಳಗಾವಿಯಲ್ಲಿ ಹೇಗೆ ತಲೆ ನೋವಾಗಿದ್ದಾರೋ ಅದೇ ರೀತಿ ಮಹಾರಾಷ್ಟ್ರ ಸರ್ಕಾರಕ್ಕೂ ತಲೆ ನೋವಾಗುವ ದಿನಗಳು ಬಹಳ ದೂರವಿಲ್ಲ. ಕನ್ನಡ-ಮರಾಠಿಗರ ಸೌಹಾರ್ದತೆ ಕೆಡಿಸಿರುವ ಎಂಇಎಸ್‌ಗೆ ಮರಾಠಿ ಜನ ತಕ್ಕ ಪಾಠ ಕಲಿಸಿದ್ದಾರೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಎಲ್ಲ ಕಡೆಗೂ ಧರಣಿ ನಡೆಸಲಿ. ಅದನ್ನು ನಾವು ಸ್ವಾಗತಿಸುತ್ತೇವೆ. ನೆಲಕಚ್ಚಿರುವ ಎಂಇಎಸ್‌ ವಿಸರ್ಜನೆ ಮಾಡುವುದು ಒಳಿತು.
ಅಶೋಕ ಚಂದರಗಿ, ಕನ್ನಡ ಹೋರಾಟಗಾರರು

 


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ