ಚನ್ನಪಟ್ಟಣ: ನಾಡಿನ ಅಧಿದೇವತೆ ಚಾಮುಂಡೇಶ್ವರಿ ಆಶೀರ್ವಾದವಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ನಾನೇ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಬೃಹತ್ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಉದ್ದೇಶದಿಂದ ಈಗಾಗಲೇ ರಾಜ್ಯಾದ್ಯಂತ 73ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ 15ರಿಂದ 18 ಗಂಟೆಗಳ ಕಾಲ ನಿರಂತರ ಪಂಚರತ್ನ ಯಾತ್ರೆ ಬಗ್ಗೆ ಪ್ರಚಾರ ನಡೆಸಿದ್ದೇನೆ ಎಂದರು.
ನನಗೆ 2 ಬಾರಿ ಹೃದಯ ಬೈಪಾಸ್ ಸರ್ಜರಿ ಆಗಿದೆ. ಪಂಚಯಾತ್ರೆ ಪ್ರಾರಂಭದ ದಿನದಿಂದಲೂ ಮಾಂಸಾಹಾರ ತಿನ್ನುವುದನ್ನು ಬಿಟ್ಟಿದ್ದೇನೆ. ಈಗಾಗಲೇ 75ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಓಡಾಡಿದ್ದೇನೆ. ನಾನು ಹೋದ ಕಡೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನನ್ನ ಬಳಿ ಬಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಪಂಚರತ್ನ ಯೋಜನೆ ಜಾರಿಯಾಗಬೇಕಾದರೆ ಸುಮಾರು 2.5 ಲಕ್ಷ ಕೋಟಿ ರೂ. ಬೇಕು. ಅದಕ್ಕೆ ಪೂರಕವಾಗಿ ಹಣ ತರುವ ಯೋಜನೆಯನ್ನು ರೂಪಿಸಬೇಕಿದೆ ಎಂದರು.
ಪಾಪ ಹಣದಿಂದ ಸರ್ಕಾರ ತೆಗೆದರು:
ಪಾಪದ ಹಣ ಬಳಸಿಕೊಂಡು ಸಮ್ಮಿಶ್ರ ಸರ್ಕಾರವನ್ನು ತೆಗೆದ ಕೀರ್ತಿ ನಿಮ್ಮ ಕ್ಷೇತ್ರದ ಮಾಜಿ ಶಾಸಕರಿಗೆ ಸಲ್ಲಲಿದೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಸ್ವಾಭಿಮಾನಿ ನಡಿಗೆ ಕಾರ್ಯಕ್ರಮದಲ್ಲಿ ನಾನು ಕೂಡ ಸಿಎಂ ಆಗುತ್ತೇನೆಂದು ಅಂತಾ ಸಿಪಿವೈ ಗ್ರಾಮೀಣ ಭಾಗದಲ್ಲಿ ಮತ ಪಡೆಯುತ್ತಿದ್ದಾರೆ ಎಂಬ ಮಾತುಗಳನ್ನು ಕೂಡ ಕೇಳಿದ್ದೇನೆ ಎಂದರು.
ಕ್ಷೇತ್ರದ ಜನ ಸೀರೆಗೆ ಮತ ಮಾರಿಕೊಳ್ಳಲ್ಲ
ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಳೆದ 20 ವರ್ಷಗಳ ಕಾಲ ಶಾಸಕರಾಗಿದ್ದರು. ಅವರು ಕ್ಷೇತ್ರದಲ್ಲಿ ಒಳ್ಳೆಯ ಕಲಸ ಮಾಡಿದ್ರೆ ಈಗ ಕ್ಷೇತ್ರದ ಜನತೆಗೆ ಸೀರೆ ಹಚ್ಚುವ ಅವಶ್ಯಕತೆ ಇಲ್ಲ. ನಮ್ಮ ಕ್ಷೇತ್ರದ ಜನತೆ ಒಂದು ಸೀರೆಗಾಗಿ ತಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ. ನಮ್ಮ ಜನರು ಸ್ವಾಭಿಮಾನಿಗಳು. ಹಾಗೆಯೇ ಇಗ್ಗಲೂರಿನಲ್ಲಿ ದೇವೇಗೌಡರು ಡ್ಯಾಂ ಕಟ್ಟದಿದ್ದರೆ ಕ್ಷೇತ್ರಕ್ಕೆ ಎಲ್ಲಿ ನೀರಾವರಿ ಮಾಡಲು ಸಾಧ್ಯವಾಗುತ್ತಿತ್ತು?, ಈಗ ಕ್ಷೇತ್ರದಲ್ಲಿ ನೀರಾವರಿ ಹರಿಕಾರ, ಭಗೀರಥ ಅಂತಾ ಎಂದು ಬರೆದುಕೊಂಡಿದ್ದಾರೆ. ಈಗ ಸತ್ತೆಗಾಲ ಯೋಜನೆ ರೂಪಿಸಿ ಈಡೀ ಜಿಲ್ಲೆಗೆ ಶಾಶ್ವತವಾಗಿ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ ಎಂದು ಸಿಪಿವೈ ವಿರುದ್ದ ಎಚ್‌ಡಿಕೆ ವಾಗ್ಧಾಳಿ ನಡೆಸಿದ್ದಾರೆ.