ಬೆಳಗಾವಿ : ಕಾಂಗ್ರೆಸ್ ನ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆ ರೀತಿ ನಡೆಸಿಕೊಳ್ಳಬಾರದಿತ್ತು..ನಿಮಗೆ ಈಗ ತಿಳಿಯಿತೇ, ಕಾಂಗ್ರೆಸ್ ಪಕ್ಷದ ರಿಮೋಟ್ ಯಾರ ಕೈಯಲ್ಲಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಬೆಳಗಾವಿ ನಗರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಸಿ ಮಾತನಾಡಿದರು.
”ನಾನು ಮಲ್ಲಿಕಾರ್ಜುನ ಖರ್ಗೆ ಜೀ ಅವರಿಗೆ ತುಂಬಾ ಗೌರವ ನೀಡುತ್ತೇನೆ.ಕಾಂಗ್ರೆಸ್ ಅಧಿವೇಶನ ನಡೆಯುತ್ತಿತ್ತು. ಅವರೇ ಹಿರಿಯ ನಾಯಕ. ಅಲ್ಲಿ ಬಿಸಿಲಿತ್ತು, ಆದರೆ ಖರ್ಗೆ ಜೀ ಅವರಿಗೆ ಬಿಸಿಲಲ್ಲಿ ಕೊಡೆ ಭಾಗ್ಯ ಸಿಗಲಿಲ್ಲ… ಯಾರೋ ಬೇರೆಯವರಿಗೆ (ಸೋನಿಯಾ ಗಾಂಧಿ) ಕೊಡೆ ಹಿಡಿಯಲಾಗಿತ್ತು. ಇದನ್ನು ನೋಡಿದರೆ ರಿಮೋಟ್ ಕಂಟ್ರೋಲ್ ಯಾರ ಕೈಯಲ್ಲಿದೆ ಎಂಬುದು ಸಾರ್ವಜನಿಕರಿಗೆ ಅರ್ಥವಾಗುತ್ತಿದೆ.ಕಾಂಗ್ರೆಸ್ ಪಕ್ಷ ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಅವರಿಗೆ ಅವಮಾನ ಮಾಡಿತ್ತು” ಎಂದು ಕಿಡಿ ಕಾರಿದರು.
ಅತ್ಯಾಧುನಿಕ ರೈಲು ನಿಲ್ದಾಣಗಳು ಮತ್ತು ಹೊಸ ರೈಲು ಮಾರ್ಗಗಳು ಈ ಪ್ರದೇಶದಲ್ಲಿ ರೈಲ್ವೆ ಸಂಪರ್ಕವನ್ನು ಹೆಚ್ಚಿಸುತ್ತವೆ.ಬೆಳಗಾವಿ ಆರೋಗ್ಯ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಕೇಂದ್ರವಾಗಿದೆ. ಉತ್ತಮ ರೈಲು ಸಂಪರ್ಕವು ಈ ವಲಯಗಳು ಬೆಳೆಯಲು ಮತ್ತು ಸ್ಥಳೀಯ ಆರ್ಥಿಕತೆಗೆ ಸಹಾಯ ಮಾಡಲು ಸಹಾಯ ಮಾಡುತ್ತದೆ ಎಂದರು.
ಸಣ್ಣ ರೈತರನ್ನು ದಶಕಗಳಿಂದ ನಿರ್ಲಕ್ಷಿಸಲಾಗಿದೆ, ಆದರೆ ಬಿಜೆಪಿ ಆಡಳಿತದಲ್ಲಿ ಈ ರೈತರು ನಮ್ಮ ಆದ್ಯತೆ. ನಮ್ಮ ರೈತರ ಖಾತೆಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ 2.5 ಲಕ್ಷ ಕೋಟಿ ರೂ ನೀಡಿದ್ದೇವೆ. ಇಂದಿನ ಬದಲಾಗುತ್ತಿರುವ ಭಾರತವು ಒಂದರ ಹಿಂದೆ ಒಂದರಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ, ಪ್ರತಿಯೊಬ್ಬ ವಂಚಿತರಿಗೂ ಆದ್ಯತೆ ನೀಡುತ್ತಿದೆ ಎಂದರು.
”ಕೃಷಿಯೇ ಇರಲಿ, ಕೈಗಾರಿಕೆಯೇ ಇರಲಿ, ಪ್ರವಾಸೋದ್ಯಮವೇ ಇರಲಿ, ಉತ್ತಮ ಶಿಕ್ಷಣವಿರಲಿ ಅಥವಾ ಉತ್ತಮ ಆರೋಗ್ಯವಾಗಿರಲಿ… ಇವೆಲ್ಲವೂ ಉತ್ತಮ ಸಂಪರ್ಕದಿಂದ ಮತ್ತಷ್ಟು ಸಶಕ್ತವಾಗಿವೆ. ಅದಕ್ಕಾಗಿಯೇ ಕಳೆದ ವರ್ಷಗಳಿಂದ ನಾವು ಕರ್ನಾಟಕದ ಸಂಪರ್ಕದ ಬಗ್ಗೆ ಹೆಚ್ಚು ಗಮನಹರಿಸಿದ್ದೇವೆ. ಪ್ರಸ್ತುತ ಕರ್ನಾಟಕದಲ್ಲಿ 45 ಸಾವಿರ ಕೋಟಿ ರೂ.ಗಳ ರೈಲ್ವೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ” ಎಂದರು.
”ಕರ್ನಾಟಕ ಯಾವಾಗಲೂ ಸಿರಿ ಧಾನ್ಯದ ಕೇಂದ್ರವಾಗಿದ್ದು, ಈ ವರ್ಷದ ಬಜೆಟ್‌ನಲ್ಲಿ ಅದಕ್ಕೆ ಹೊಸ ಗುರುತನ್ನು ನೀಡಿದ್ದೇವೆ. ಸಿರಿ ಧಾನ್ಯ ಬೆಳೆಯಲು ತಗಲುವ ವೆಚ್ಚ ಕಡಿಮೆ, ನೀರಾವರಿಗೆ ಬೇಕಾಗುವ ನೀರು ಕೂಡ ಕಡಿಮೆಯಾಗಿದ್ದು ಸಣ್ಣ ರೈತರಿಗೆ ಅನುಕೂಲವಾಗಲಿದೆ. ಸಿರಿ ಧಾನ್ಯಪ್ರತಿ ಋತುವಿನಲ್ಲಿ, ಪ್ರತಿ ಸ್ಥಿತಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಹೆಚ್ಚು ಪೌಷ್ಟಿಕವಾಗಿದೆ.
ಅದಕ್ಕಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಸಿರಿ ಧಾನ್ಯಗಳಿಗೆ ಶ್ರೀ-ಅನ್ನ ಎಂದು ಹೊಸ ಗುರುತನ್ನು ನೀಡಿದ್ದೇವೆ.ದೇಶದ ಕೃಷಿಯಲ್ಲಿ ಭವಿಷ್ಯದ ಸವಾಲುಗಳನ್ನು ನೋಡಿದಾಗ, ನಾವು ಅದಕ್ಕೆ ಜೀವ ತುಂಬಲು ನಿರ್ಧರಿಸಿದ್ದೇವೆ” ಎಂದರು.
”2014 ರಲ್ಲಿ, ಕೃಷಿಗಾಗಿ ಭಾರತದ ಬಜೆಟ್ 25,000 ಕೋಟಿ ರೂ. ಈ ವರ್ಷದ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದೇವೆ” ಎಂದರು.
”ನಾವು ಮಧ್ಯವರ್ತಿಗಳಿಲ್ಲದೆ ನೇರವಾಗಿ ಇಲ್ಲಿಂದ ದೇಶಾದ್ಯಂತ ರೈತರಿಗೆ 16,000 ಕೋಟಿ ರೂ.ಖಾತೆಗಳಿಗೆ ಹಾಕಿದ್ದೇವೆ. ಇಷ್ಟು ದೊಡ್ಡ ಮೊತ್ತವನ್ನು ಕ್ಷಣಾರ್ಧದಲ್ಲಿ ವರ್ಗಾವಣೆ ಮಾಡಿದ್ದು, ಮಧ್ಯವರ್ತಿ ಇಲ್ಲ, ಕಮಿಷನ್ ಇಲ್ಲ, ಭ್ರಷ್ಟಾಚಾರ ಇಲ್ಲ… ಕಾಂಗ್ರೆಸ್ ಆಳ್ವಿಕೆ ಇದ್ದಿದ್ದರೆ 16,000 ಕೋಟಿ.ರೂ.ಗಳಲ್ಲಿ 12-13 ಸಾವಿರ ಕೋಟಿ ರೂಪಾಯಿ ಎಲ್ಲೋ ಮಾಯವಾಗುತ್ತಿತ್ತು… ಆದರೆ ನಮ್ಮ ಸರಕಾರ ಕೊಡುವ ಪ್ರತಿ ಪೈಸೆಯೂ ನಿಮ್ಮದೇ… ಅದು ನಿಮಗಾಗಿ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ನರೇಂದ್ರಸಿಂಗ್ ಥೋಮರ್, ಶೋಭಾ ಕರಂದ್ಲಾಜೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ.