ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಬಬಲೇಶ್ವರ ಬಿಟ್ಟು ನಾನು ಪ್ರತಿನಿಧಿಸುತ್ತಿರುವ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನಗಿರಲಿ ಎಂದು ಸ್ವಪಕ್ಷೀಯ ಬಸವನಬಾಗೇವಾಡಿ ಹಾಲಿ ಶಾಸಕ ಶಿವಾನಂದ ಪಾಟೀಲ ಆಹ್ವಾನಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ನನ್ನ ಮೂಲ ಕ್ಷೇತ್ರವಾಗಿದ್ದು, ಅಲ್ಲಿಂದ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ಧೇನೆ. ರಾಜಕೀಯ ಕಾರಣದಿಂದ ಬಬಲೇಶ್ವರ ಕ್ಷೇತ್ರದ ಜನರಿಗೆ ಹೇಳದೇ ನಾನು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋಗಿದ್ದೇನೆ. ಅಲ್ಲಿನ ಜನರಿಗೆ ಹೇಳದೇ ಹೋದದ್ದು ತನ್ನ ತಪ್ಪು. ಆದರೂ ಎರಡೂ ಕ್ಷೇತ್ರದ ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸ ಇರಿಸಿಕೊಂಡಿದ್ದಾರೆ ಎಂದರು.
ಇದರ ಹೊರತಾಗಿ ಪಕ್ಷದ ವರಿಷ್ಠರು ಸಧ್ಯ ನಾನು ಪ್ರತಿನಿಧಿಸುತ್ತಿರುವ ಬಸವನಬಾಗೇವಾಡಿ ಮಾತ್ರವಲ್ಲ, ಬಬಲೇಶ್ವರ, ವಿಜಯಪುರ ನಗರ ಕ್ಷೇತ್ರಕ್ಕೆ ಟಿಕೆಟ್ ನೀಡಿದರೂ ನಾನು ಸ್ಪಧಿಸಲು ಸಿದ್ಧನಿದ್ಧೇನೆ ಎಂದರು.
ಇನ್ನು ವಿಜಯಪುರ ನಗರದ ಓರ್ವ ವ್ಯಕ್ತಿ ವಿಜಯಪುರ ನಗರದಿಂದ ಸ್ಪರ್ಧಿಸುವ ನನ್ನ ಹೇಳಿಕೆಯನ್ನು ನಾನು ಬ್ಲಾಕ್‍ಮೇಲ್ ರಾಜಕೀಯ ಮಾಡುವುದಾಗಿ ಟೀಕಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರು ಉಲ್ಲೇಖಿಸದೇ ತಿರುಗೇಟು ನೀಡಿದ ಶಾಸಕ ಶಿವಾನಂದ, ವಿಜಯಪುರ ನಗರದಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದರೆ ಅವರಿಗೆ ಸೂಕ್ತ ಉತ್ತರ ನೀಡಲು ಸಿದ್ಧನಿದ್ಧೇನೆ ಎಂದರು.
ಸದ್ಯಕ್ಕೆ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಸೂಚಿಸಿದ್ದು, ಅದರಂತೆ ಕೆಲಸ ಮಾಡುತ್ತಿದ್ದೇನೆ. ಇದರ ಹೊರತಾಗಿ ನನ್ನ ಪುತ್ರಿ ಸಂಯುಕ್ತಾ ಪಾಟೀಲ ಸದ್ಯ ನಾನು ಪ್ರತಿನಿಧಿಸುತ್ತಿರುವ ಬಸವನಬಾಗೇವಾಡಿ ಕ್ಷೇತ್ರದಿಂದ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದಾಳೆ. ಸ್ವಂತ್ರಳಾಗಿದ್ದಾಳೆ. ಪಕ್ಷದ ಸಂಘಟನೆಗೆ ಶ್ರಮಿಸಿರುವ ಆಕೆ ಪಕ್ಷದ ಸ್ಪರ್ಧೆಯ ಆಕಾಂಕ್ಷೆ ವ್ಯಕ್ತಪಡಿಸಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.