ದಾವಣಗೆರೆ: ಭಾರತೀಯ ಜನತಾ ಪಾರ್ಟಿಗೆ ಸನ್ಯಾಸಿಗಳೂ ಸೇರಿದಂತೆ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ಥನಾರಾಯಣ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ದಲ್ಲಿ ಎಲ್ಲರೂ ಭಾಗವಹಿಸಬೇಕಾಗುತ್ತೆ.
ಅಂತಹ ಆಲೋಚನೆ-ವಿಚಾರ ಇರೋರು ಬಿಜೆಪಿ ಸೇರಬಹುದು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನ್ಯಾಸಿ ಆಗಿದ್ದವರು. ಸನ್ಯಾಸಿಗಳಾಗಿದ್ದವರು ಶಾಸಕ-ಮಂತ್ರಿಯಾಗಿದ್ದಾರೆ.
ಲೋಕಸಭೆಗೂ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಇದ್ದಾರೆ. ಹೀಗಾಗಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದರು.
ಅರ್ಕಾವತಿ ಬಡಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎಂಟು ಸಾವಿರ ಕೋಟಿ ಅವ್ಯವಹಾರ ಮಾಡಿದ್ದಾರೆ ಎನ್ನುವುದನ್ನು ಸದನದಲ್ಲೇ ಹೇಳಿದ್ದೇವೆ. 800 ಎಕರೆಗೂ ಹೆಚ್ಚು ಜಮೀನು ರೀಡೂ ಮಾಡಿ ಎಷ್ಟು ಹಣ ಲಾಭ ಮಾಡಿಕೊಂಡಿದ್ದಾರೆ ಅನ್ನೋದನ್ನ ತಿಳಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್‌ನವರು ರಾಜ್ಯದ ಜನರ ಮೇಲೆ ಕಿವಿಗೆ ಹೂವಿಡುವ ಕೆಲಸ ಮಾಡುತಿದ್ದಾರೆ. 52 ಸೀಟ್‌ನ ಬಸ್‌ನಲ್ಲಿ ಓಡಾಡುತ್ತಿರುವ ಅವರು ಅಷ್ಟೇ ಸೀಟ್ ಗೆಲ್ಲುತ್ತಾರೆ. 120ರಿಂದ 79 ಸೀಟಿಗೆ ಇಳಿದವರು ಈಗ 52ಕ್ಕೆ ಬರುತ್ತಾರೆ ಎಂದರು.