ಲಿಂಗಸೂಗುರು: ಅರ್ಕಾವತಿ ಪ್ರಕರಣದ ತನಿಖೆ ಲೋಕಾಯುಕ್ತಕ್ಕೆ ವಹಿಸಿದ್ದು, ತನಿಖೆ ಬಳಿಕ ತಪ್ಪಿತಸ್ಥರು ಜೈಲು ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು.
ಶನಿವಾರ ವಿಜಯ ಸಂಕಲ್ಪ ಯಾತ್ರೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆಂದು ನಾನು ಹೇಳಿದ್ದೆ.
ನ್ಯಾ| ಕೆಂಪಣ್ಣ ಕೊಟ್ಟ ವರದಿ ಲೋಕಾಯುಕ್ತಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ನಾಯಕರ ವಿರುದ್ಧ ಕ್ರಮ ಜರಗಲಿದೆ. ತಪ್ಪಿತಸ್ಥರು ಜೈಲಿಗೆ ಹೋಗುತ್ತಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ಈ ಪ್ರಕರಣ ನಡೆದಿತ್ತು. ಸಿದ್ದರಾಮಯ್ಯನವರು ಸಿಕ್ಕಿ ಬೀಳುತ್ತೇನೆಂಬ ಭಯದಲ್ಲಿ ಲೋಕಾಯುಕ್ತ ಸಂಸ್ಥೆ ಮುಚ್ಚಿಸಿ ಹಲ್ಲಿಲ್ಲದ ಎಸಿಬಿ ಹುಟ್ಟು ಹಾಕಿದ್ದರು. ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಮಾಡಿದ್ದರು. ಈಗ ವರದಿ ನಮ್ಮ ಕೈಯಲ್ಲಿದೆ. ಈಗ ಆ ವರದಿ, ದಾಖಲಾತಿ ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ ಎಂದರು.