ಬೆಳಗಾವಿ: ಅಪಹರಣ, ದರೋಡೆ, ಕೊಲೆ ಸೇರಿದಂತೆ ಜಿಲ್ಲೆಯ ವಿವಿಧೆಡೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ನಾಲ್ವರು ಆರೋಪಿಗಳ ತಂಡವನ್ನು ಹಾರೂಗೇರಿ ಪೊಲೀಸರ ತಂಡ ಸೋಮವಾರ ಬಂಧಿಸಿದೆ.
ರಾಯಬಾಗ ತಾಲ್ಲೂಕಿನ ಖಣದಾಳ ಗ್ರಾಮದ ಭುಜಂಗ ತುಕಾರಾಮ್ ಜಾಧವ, ವಾಸುದೇವ ಸಹದೇವ ನಾಯಕ, ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಈರಯ್ಯ ಸಾತಯ್ಯ ಹಿರೇಮಠ, ಅಥಣಿ ತಾಲ್ಲೂಕಿನ ನಂದಗಾಂವದ ಶಿವಾನಂದ ನಾಣಪ್ಪ ಸಲಾಖನ್ ಬಂಧಿತರು.
ಫೆ.11ರಂದು ನಾಲ್ವರೂ ಸೇರಿಕೊಂಡು ಖಣದಾಳದ ಶಾಂತವ್ವ ಆಜೂರೆ ಎನ್ನುವವರ ಪತಿಯನ್ನು, ಮಾರಕಾಸ್ತ್ರ ತೋರಿಸಿ ಅಪಹರಿಸಿ ₹ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆದ ನಂತರವೂ ವ್ಯಕ್ತಿಯನ್ನು ಬಿಡದೇ ಮತ್ತೆ 30 ಲಕ್ಷ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಹಿಳೆ ಹಾರೂಗೇರಿ ಠಾಣೆಗೆ ದೂರು ದಾಖಲಿಸಿದ್ದರು.
ಪೊಲೀಸರ ತಂಡ ಆರೋಪಿಗಳನ್ನು ಫೆ. 19ರಂದು ವಶಕ್ಕೆ ಪಡೆಯಿತು. ವಿಚಾರಣೆ ನಡೆಸಿದಾಗ ಅವರ ಇನ್ನಷ್ಟು ಪ್ರಕರಣಗಳು ಹೊರಬಿದ್ದಿವೆ. 2022ರ ಆಗಸ್ಟ್ 18ರಂದು ವ್ಯಕ್ತಿಯೊಬ್ಬರನ್ನು ಅಪಹಣ ಮಾಡಿ ಹಣ ಕೇಳಿದ್ದರು. ಕೊಡದೇ ಇದ್ದಾಗ ಕೊಲೆ ಮಾಡಿದ್ದರು. ಸೆಪ್ಟೆಂಬರ್ 8ರಂದು ಖಣದಾಳ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಮಾರಕಾಸ್ತ್ರ ತೋರಿಸಿ ₹ 30 ಸಾವಿರ ನಗದು, ಒಂದು ಜೆಸಿಬಿ, ಬೈಕ್, ಮೊಬೈಲ್ ದರೋಡೆ ಮಾಡಿದ್ದರು. ಸೆ. 23ರಂದು ವ್ಯಕ್ತಿಯೊಬ್ಬರನ್ನು ಅಪಹರಿಸಿ ₹ 5 ಲಕ್ಷ ಪಡೆದಿದ್ದರು. ಬಳಿಕವೂ ಅವರನ್ನು ಬಿಡದೇ ಮತ್ತೆ ₹ 17 ಲಕ್ಷ ಕೇಳಿದ್ದರು. ವಿಚಾರಣೆ ವೇಳೆ ಈ ಅಪರಾಧಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಬಂಧಿತರಿಂದ 2 ಕಾರ್, ಮಾರಕಾಸ್ತ್ರ, ₹4 ಲಕ್ಷ ಹಣ, 7 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ರಾಯಬಾಗ, ಜಮಖಂಡಿ, ಆಲಮೇಲ್, ಚಿಕ್ಕೋಡಿ, ಬೆಳಗಾವಿ ಮಾರ್ಕೆಟ್ ಠಾಣೆ, ಗೋಕಾಕ ಶಹರ, ಕಟಕೋಳ, ಘಟಪ್ರಭಾ ಸೇರಿಂದತೆ 10 ಠಾಣೆಗಳಲ್ಲಿ ದಾಖಲಾದ 20 ಪ್ರಕರಣಗಳಲ್ಲಿ ಇವರು ಬೇಕಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಸಿಪಿಐ ರವಿಚಂದ್ರ ಡಿ.ಬಿ, ಪಿಎಸ್‌ಐ ರೇಣುಕಾ ಜಕನೂರ, ಪಿಸ್‌ಐಗಳಾದ ಪಿ.ಬಿ.ಪೂಜಾರ ಹಾರೂಗೇರಿ ಠಾಣೆಯ ಎಲ್ಲ ಸಿಬ್ಬಂದಿ ಕೂಡ ಭಾಗವಹಿಸಿದ್ದರು.