Breaking News

ಹರ್ಷೋದ್ಗಾರದಲ್ಲಿ ಸಿದ್ಧಾರೂಢ ರಥೋತ್ಸವ, ಲಕ್ಷಾಂತರ ಜನ ಸಾಕ್ಷಿ

Spread the love

ಹುಬ್ಬಳ್ಳಿ: ಎಲ್ಲಿ ನೋಡಿದರು ಶಿವ ಭಕ್ತರು (Shiva Devotees). ಹಣೆ ಮೇಲೆ ವಿಭೂತಿ. ಬಾಯಲ್ಲಿ ಶಿವ ಪಂಚಾಕ್ಷರಿ ಮಂತ್ರ ಜಪಿಸುತ್ತ ಆರಾಧ್ಯ ದೈವ ಗುರುದ್ವಯರ ರಥವನ್ನ ಎಳೆಯುವ ಸಂಭ್ರಮ ಹೇಳತೀರದು. ಸಾಕ್ಷಾತ್ ಕೈಲಾಸವೇ ಭುವಿಗಿಳಿದ ಅನುಭವ. ಇಷ್ಠಾರ್ಥ ಸಿದ್ಧಿಗಾಗಿ ತೇರಿಗೆ ಹಣ್ಣು, ಉತತ್ತಿ ಎಸೆದು ಸಿದ್ದಾರೂಡರ ರಥವನ್ನು (Siddharoodha Ratha) ಅದ್ಧೂರಿಯಾಗಿ ಭಾನುವಾರ ಎಳೆಯಲಾಯಿತು.

ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ವತಿಯಿಂದ ಶಿವರಾತ್ರಿ ಮಹೋತ್ಸವದ (Maha Shivaratri Mahotsava) ನಿಮಿತ್ತ ಭಾನುವಾರ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಸಿದ್ದಾರೂಢ ಸ್ವಾಮಿಯ (Siddhroodha Swamy) ರಥೋತ್ಸವ ಸಂಭ್ರಮದಿಂದ ನಡೆಯಿತು.

ಸಿದ್ಧಾರೂಢರ ರಥ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆಯೇ ಭಕ್ತಾದಿಗಳು ಉತ್ತತ್ತಿ (ಒಣ ಖರ್ಜೂರ), ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡಿತು.

ಓಂ ನಮಃ ಶಿವಾಯ

ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ-ಮೇಳಗಳೊಂದಿಗೆ ಸಾಗಿದ ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತು. ತೇರು ಮುಂದೆ ಸಾಗುತ್ತಿದ್ದಂತೆ ಓಂ ನಮಃ ಶಿವಾಯ, ಹರ ಹರ ಮಹಾದೇವ ಎಂಬ ಉದ್ಗಾರ ಭಕ್ತಿಲೋಕ ಧರೆಗಿಳಿಸಿದಂತೆ ಭಾಸವಾಯಿತು.

ಸಂಜೆ 5.30 ಗಂಟೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಭೂ ಕೈಲಾಸ, ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನ ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯಿತು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಶ್ರೀಮಠಕ್ಕೆ ದೀಪಾಲಂಕಾರ

ಟೆಂಪೊ, ಟ್ರ್ಯಾಕ್ಟರ್, ದ್ವಿಚಕ್ರ, ಕಾರುಗಳಲ್ಲಿ ಮಾತ್ರವಲ್ಲದೇ ಪಾದಯಾತ್ರೆ ಮೂಲಕವೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಶಿವರಾತ್ರಿ ಪ್ರಯುಕ್ತ ವಿಶೇಷ ಕಳೆ ಪಡೆದಿದ್ದ ಶ್ರೀಮಠ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಇನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಸೇರಿದಂತೆ ರಾಜ್ಯದ ಹುಬ್ಬಳ್ಳಿ – ಧಾರವಾಡ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕಲಬುರಗಿ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

70 ಅಡಿ ಎತ್ತರದ ರಥ

ಮಹಾ ರಥೋತ್ಸವದ ಅಂಗವಾಗಿ ಸುಮಾರು 70 ಅಡಿ ಎತ್ತರದ ತೇರನ್ನ ಶೃಂಗರಿಸಲಾಗಿತ್ತು. ಮಠದ ಆವರಣದಿಂದ ಹೊರಟ ತೇರು ಮಹಾದ್ವಾರದ ವರೆಗೆ ತಲುಪಿ ಮತ್ತೆ ಮಠಕ್ಕೆ ಮರಳಿತು. ಇನ್ನು ಜಾತ್ರೆಗೆ ಬರುವ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಲು ಶ್ರೀನಿವಾಸ ನಗರದ ಉದ್ಯಾನದ ಬಳಿ, ಅಂಬೇಂಡ್ಕರ್ ಕ್ರಿಡಾಂಗಣ, ಆನಂದನಗರ ರಸ್ತೆಗೆ ಹೊಂದಿಕೊಂಡು ವ್ಯವಸ್ಥೆ ಮಾಡಲಾಗಿತ್ತು.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ