ಹುಬ್ಬಳ್ಳಿ: ‘ಬಿಜೆಪಿ ಯೋಜನೆಗಳನ್ನು ಕಾಂಗ್ರೆಸ್ ನಕಲು ಮಾಡುತ್ತಿದೆ. ನಾನು ‘ಗೃಹಿಣಿ ಶಕ್ತಿ’ ಯೋಜನೆ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದೆ, ಅದನ್ನೇ ಇಟ್ಟುಕೊಂಡು ಅವರು ‘ಗೃಹಲಕ್ಷ್ಮಿ’ ಯೋಜನೆ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಕಿವಿಯ ಮೇಲೆ ಜನ ಶಾಶ್ವತವಾಗಿ ಹೂ ಇಡಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಭ್ರಷ್ಟ ಬಿಜೆಪಿಗೆ ಪ್ರತ್ಯೇಕ ನರಕವನ್ನೇ ಸೃಷ್ಟಿಸಬೇಕು’ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿಕೆ ಕುರಿತ ಪ್ರತಿಕ್ರಿಯಿಸಿದ ಅವರು, ‘ಸುರ್ಜೇವಾಲಾಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ಅವರು ಮೊದಲು ಕಾಂಗ್ರೆಸ್ ನಾಯಕರ ಜಗಳ ಬಗೆಹರಿಸಲಿ. ಕಾಂಗ್ರೆಸ್ ಅಸುರರ ದೊಡ್ಡ ಪಟ್ಟಿಯೇ ಇದೆ’ ಎಂದರು.
ಸಿದ್ಧರಾಮಯ್ಯ ಮಾತು ತಪ್ಪಿದ ಮಗ: ನಂತರ ಹಾವೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಿದ್ಧರಾಮಯ್ಯ ಅವರು ಮಾತು ತಪ್ಪಿದ ಮಗ. ತಮ್ಮ ಬಜೆಟ್ ನಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು, ಅದನ್ನು ನಾಲ್ಕು ಕೆಜಿಗೆ ಇಳಿಸಿದರು. ಚುನಾವಣೆ ಬಂದಾಗ ಏಳು ಕೆಜಿ ಮಾಡಿದರು. ಹೀಗೆ ಜನರನ್ನು ಯಾಮಾರಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಶಾಶ್ವತವಾಗಿ ಅವರಿಗೇ ಹೂ ಇಟ್ಟುಕೊಳ್ಳುವ ಪರಿಸ್ಥಿತಿ ಬರಲಿದೆ’ ಎಂದು ಟೀಕಿಸಿದರು. ‘ಮಹದಾಯಿ ಯೋಜನೆ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು. ಈ ಬಗ್ಗೆ ಎಲ್ಲ ತಯಾರಿ ಅಂತಿಮ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು. ರಾಮ ನಗರದಲ್ಲಿ ರಾಮ ಮಂದಿರವನ್ನು ಕಾಂಗ್ರೆಸ್ ,ಬಿಜೆಪಿ, ಜೆಡಿಎಸ್ ಅಂತ ಮಾಡಿಲ್ಲ, ಅಲ್ಲಿ ರಾಮ ಬೆಟ್ಟ ಅಂತ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟ ಇದೆ. ಅಲ್ಲದೇ ಆ ಭಾಗದ ಜನರ ಇಚ್ಛೆ ಇತ್ತು, ಅದಕ್ಕೆ ಸ್ಪಂದಿಸಿದ್ದೇನೆ ಎಂದರು.