ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿರುವ 47,001 ರೌಡಿಶೀಟರ್‌ಗಳ ಮೇಲೂ ಖಾಕಿ ಹದ್ದಿನ ಕಣ್ಣಿಟ್ಟಿದೆ. ಹಳೇ ಚಾಳಿ ಮುಂದುವರಿಸುತ್ತಿರುವ ರೌಡಿಗಳ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ಶುರು ಹಚ್ಚಿಕೊಂಡಿದೆ.
ವಿಧಾನಸಭೆ ಚುನಾವಣೆ ರಂಗೇರಲು ಕೆಲ ತಿಂಗಳುಗಳಷ್ಟೇ ಬಾಕಿಯಿದ್ದು, ಅಲ್ಲಲ್ಲಿ ಸದ್ದಿಲ್ಲದೇ ರೌಡಿ ಚಟುವಟಿಕೆಗಳು ನಡೆಯುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.
ಈ ನಿಟ್ಟಿನಲ್ಲಿ ಫುಲ್ ಅಲರ್ಟ್ ಆಗಿರುವ ರಾಜ್ಯ ಖಾಕಿ ಪಡೆ ಕರ್ನಾಟಕದಲ್ಲಿರುವ 47,001 ರೌಡಿಗಳ ಮೇಲೂ ನಿಗಾ ಇಟ್ಟಿದೆ. ಪದೇಪದೆ ಹಳೇ ಚಾಳಿ ಮುಂದುವರಿಸುತ್ತಿರುವ ರೌಡಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು ಶೀಘ್ರದಲ್ಲಿ ಒಬ್ಬೊಬ್ಬರನ್ನೇ ಬಂಧಿಸುವ ಕಾರ್ಯ ನಡೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ರೌಡಿಗಳ ಮೇಲೆ ನಿಗಾ ಏಕೆ ?
ಇದು ಚುನಾವಣೆ ವರ್ಷವಾಗಿದ್ದು, ರೌಡಿಗಳಿಂದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವು ಗಣ್ಯರ ಜೀವಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಅಹಿತಕರ ಘಟನೆ ನಡೆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ರೌಡಿಗಳು ಬಾಲ ಬಿಚ್ಚಿದರೆ ರಾಜ್ಯದ ಘನತೆಗೆ ಕುಂದುಂಟಾಗಲಿದೆ.
ಹೀಗಾಗಿ ರೌಡಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪದೇಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಹಿಂದಿನ ಚುನಾವಣೆ ವೇಳೆ ಅಪರಾಧಗಳಲ್ಲಿ ಭಾಗಿಯಾದ ರೌಡಿಗಳನ್ನು ಜೈಲಿಗಟ್ಟಲಾಗಿದೆ. ಇತ್ತೀಚೆಗೆ ಬಾಂಡ್ ಉಲ್ಲಂ ಸಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ 35 ರೌಡಿಶೀಟರ್‌ಗಳನ್ನು ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಜೈಲಿಗಟ್ಟಿರುವುದು ಮೇಲಿನ ಅಂಶಗಳಿಗೆ ಪುಷ್ಠಿ ನೀಡುತ್ತದೆ.
ಯಾವೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ?
ಚುನಾವಣೆ ವೇಳೆ ಬಂಧನಕ್ಕೊಳಗಾದ ರೌಡಿಗಳನ್ನು ನಿರ್ದಿಷ್ಟ ಸಮಯದವರೆಗೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿಡಬಹುದು. ರಾಜ್ಯದಿಂದಲೇ ಗಡಿಪಾರು ಮಾಡುವುದು, ಗೂಂಡಾ ಕಾಯ್ದೆ ಅನ್ವಯ ಕ್ರಮ ಜರುಗಿಸಬಹುದು. ಕೆಲವೊಮ್ಮೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ರೌಡಿಗಳ ದೈನಂದಿನ ಚಟುವಟಿಕೆಗಳ ಬಗ್ಗೆ ಪೊಲೀಸರು ಗಮನ ಹರಿಸುತ್ತಿದ್ದಾರೆ. ಇವರ ಸಂಪರ್ಕದಲ್ಲಿರುವವರ ಮೇಲೆ ಕಣ್ಣಿಡಲಾಗುತ್ತದೆ. ಮೊಬೈಲ್ ಟ್ರ್ಯಾಕ್ ಮಾಡುವ ಮೂಲಕ ಸಂಚು ರೂಪಿಸುವುದನ್ನು ಪತ್ತೆಹಚ್ಚಲಾಗುತ್ತದೆ. ಬೀಟ್ ಪೊಲೀಸರು ಆಗಾಗ ರೌಡಿಗಳ ಮನೆ ಹಾಗೂ ಮನೆ ಸಮೀಪದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಾರೆ.
2023ರಲ್ಲೇ ಅತೀ ಹೆಚ್ಚು ರೌಡಿಗಳು ಪಟ್ಟಿಯಿಂದ ಹೊರಕ್ಕೆ:
2023ರ ಜನವರಿ ತಿಂಗಳಲ್ಲಿ ಅತೀ ಹೆಚ್ಚು 7,361 ರೌಡಿಶೀಟರ್‌ಗಳನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದೆ. ಮಂಗಳೂರಿನಲ್ಲಿ 781, ಉಡುಪಿ 292, ಮಂಡ್ಯ 610 , ಬೆಂಗಳೂರಿನಲ್ಲಿ 371 ರೌಡಿಗಳು ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಆದರೆ, ಇದೇ ಅವಧಿಯಲ್ಲಿ 186 ರೌಡಿಗಳು ಹೊಸ ರೌಡಿಶೀಟರ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. 2019ರಲ್ಲಿ 2,259, 2020ರಲ್ಲಿ 3,175, 2021ರಲ್ಲಿ 2,569 ಹಾಗೂ 2022ರಲ್ಲಿ 2,389 ಆರೋಪಿಗಳನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ. 2018ರಲ್ಲಿ 3,489, 2019ರಲ್ಲಿ 2,195, 2020 ರಲ್ಲಿ 1,718, 2021ರಲ್ಲಿ 8062, 2022ರಲ್ಲಿ 3,314 ಮಂದಿ ರೌಡಿಶೀಟರ್ ಕಳಂಕದಿಂದ ಮುಕ್ತಿ ಹೊಂದಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿರುವ ರೌಡಿಗಳ ಸಂಖ್ಯೆ:
ಘಟಕ- ರೌಡಿಶೀಟರ್‌ಗಳ ಸಂಖ್ಯೆ
ಬೆಂಗಳೂರು ನಗರ-7,525
ಬೆಂಗಳೂರು ಜಿಲ್ಲೆ-1,701
ಹುಬ್ಬಳಿ-ಧಾರವಾಡ-2,888
ಕಲಬುರಗಿ ಜಿಲ್ಲೆ-2,196
ಮಂಗಳೂರು ನಗರ-1,526
ದ.ಕನ್ನಡ ಜಿಲ್ಲೆ -1,158
ಉಡುಪಿ ಜಿಲ್ಲೆ-1,154
ರಾಯಚೂರು ಜಿಲ್ಲೆ-1,750
ದಾವಣಗೆರೆ ಜಿಲ್ಲೆ-1,175
ವಿಜಯಪುರ ಜಿಲ್ಲೆ-1,239
ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಪ್ರಕರಣ ಸಂಭವಿಸದಂತೆ ಕೆಲ ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ತಿಂಗಳಲ್ಲಿ ಬೆಂಗಳೂರಿನ ಪೂರ್ವ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ 16ಕ್ಕೂ ಹೆಚ್ಚಿನ ರೌಡಿಗಳ ಬಂಧನವಾಗಿದೆ.
– ಡಾ.ಭೀಮಾ ಶಂಕರ್ ಗುಳೆದ್, ಡಿಸಿಪಿ, ಪೂರ್ವ ವಿಭಾಗ.