ಬೆಳಗಾವಿ: ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕೆ ಬಳಸುವ ಕೆಲವು ಸಾಮಗ್ರಿಗಳ ದರಗಳನ್ನು ತುಸು ಕಡಿಮೆ ಮಾಡಲು, ಗುರುವಾರ ಇಲ್ಲಿ ನಡೆದ ಅಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಚಾರ ಸಾಮಗ್ರಿಗಳು, ವಾಹನ, ಪೋಸ್ಟರ್, ಮೈಕ್ ಸೇರಿದಂತೆ ವಿವಿಧ ಸಾಮಗ್ರಿಗಳ ಮಾರುಕಟ್ಟೆ ದರವನ್ನು ಪರಿಶೀಲಿಸಲಾಯಿತು.
ನೀತಿ ಸಂಹಿತೆ ಜಾರಿ ಆದ ಸಂದರ್ಭದಲ್ಲಿ ಇರುವ ಮಾರುಕಟ್ಟೆ ದರ ಹಾಗೂ ಗುಣಮಟ್ಟ ಅಧರಿಸಿ, ಸಾಮಗ್ರಿಗಳ ದರವನ್ನು ಜಿಲ್ಲಾಡಳಿತ ನಿರ್ಧರಿಸಲಿದೆ. ಕೆಲವು ಸಾಮಗ್ರಿಗಳ ದರ ಕಡಿಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುವ ವಿವಿಧ ಸಾಮಗ್ರಿಗಳ ದರಗಳನ್ನು ನಿಗದಿಪಡಿಸಿ ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ. ಅದೇ ದರಗಳ ಆಧಾರದ ಮೇಲೆ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಕೆಲ ಸಾಮಗ್ರಿಗಳ ದರಗಳು ಅಥವಾ ವೆಚ್ಚವು ನಿಗದಿತ ದರಕ್ಕಿಂತ ಕಡಿಮೆ ಇದ್ದರೆ ಸಂಬಂಧಿಸಿದವರು ನಿಯಮಾನುಸಾರ ಸಲ್ಲಿಸುವ ರಶೀದಿಯನ್ನು ಕೂಡ ಪರಿಗಣಿಸಲು ಅವಕಾಶವಿದೆ’ ಎಂದರು.
‘ಯಾವುದೇ ಸಾಮಗ್ರಿಯನ್ನು ಪ್ರಚಾರದ ಸಂದರ್ಭದಲ್ಲಿ ಬಳಕೆ ಮಾಡಿದರೆ ಮಾತ್ರ ಅದನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚ ಎಂದು ಪರಿಗಣಿಸಲಾಗುತ್ತದೆ. ಖರೀದಿಸಿ ಇಟ್ಟುಕೊಂಡಿದ್ದರೆ ಅದು ದರ ಪಟ್ಟಿಯಲ್ಲಿ ಸೇರುವುದಿಲ್ಲ’ ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ್ ಘಾಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಪರಶುರಾಮ್ ದುಡಗುಂಟಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಚುನಾವಣಾ ಶಾಖೆಯ ತಹಶೀಲ್ದಾರ್ ಸಾರಿಕಾ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳು ಮತ್ತು ನೋಂದಾಯಿತ ಪಕ್ಷಗಳ ಪ್ರತಿನಿಧಿಗಳು ದರ ನಿಗದಿ ಕುರಿತು ವಿಸ್ತೃತ ಚರ್ಚೆ ನಡೆಸಿದರು.