ಬೆಳಗಾವಿ: ‘ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದ ತಕ್ಷಣ ಪಾಲಕರು ಎದೆಗುಂದಬಾರದು. ಇದರಿಂದ ಮಕ್ಕಳೂ ಮಾನಸಿಕವಾಗಿ ಕುಂದುತ್ತಾರೆ. ಅವರ ಲವಲವಿಕೆಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಎಂಥ ಕ್ಯಾನ್ಸರ್‌ಗೂ ಚಿಕಿತ್ಸೆ ಇದೆ’ ಎಂದು ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೋಡಿ ಸಲಹೆ ನೀಡಿದರು.
ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಅಂಗವಾಗಿ, ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ್ ವಿಭಾಗವು ಬುಧವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವನದಲ್ಲಿ ಯಾವುದೇ ಕಾರಣಕ್ಕೂ ಭಯಪಡಬಾರದು. ಕ್ಯಾನ್ಸರನ್ನು ಶೀಘ್ರ ಪತ್ತೆ ಮಾಡಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ಚಿಕಿತ್ಸೆ ನೀಡಲು ಪಾಲಕರು ಸಹಕರಿಸಬೇಕು’ ಎಂದರು.
‘ಏನೂ ಅರಿಯದ ಮಕ್ಕಳಲ್ಲೂ ಕ್ಯಾನ್ಸರ್ ಕಾಣಿಸಿಕೊಳ್ಳಲು ಕಾರಣ ಅರಿವುನ ಕೊರತೆ. ಎಂಥ ಆಹಾರಗಳನ್ನು ತಿನ್ನಬೇಕು, ಎಂಥ ಆಹಾರ ಮಕ್ಕಳಿಗೆ ಕೊಡಬೇಕು ಎಂಬ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು’ ಎಂದೂ ಹೇಳಿದರು.
‘ತುರ್ತು ಸಂದರ್ಭದಲ್ಲಿ ವೈದ್ಯರು ಕೂಡ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಯಾವುದೇ ಒಳ್ಳೆಯ ಕಾರ್ಯಕ್ಕೆ ಜನರ ಸಹಕಾರ ಸದಾ ಇರುತ್ತದೆ. ಆದರೂ ಕೆಲವರು ಕೊಂಕು ಮಾತನಾಡುವವರೂ ಇದ್ದಾರೆ. ಅವರನ್ನು ದೂರ ಇಟ್ಟು ಕೆಲಸ ಮುಂದುವರಿಸಬೇಕು’ ಎಂದು ಅವರು ಹೇಳಿದರು.