ಗುರು ಮಠಕಲ್ ತಾಲ್ಲೂಕಿನ ಅನಪುರದಲ್ಲಿ ಕಲುಷಿತ ನೀರು ಕುಡಿದು ಬುಧವಾರ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ.
ಸಾವಿತ್ರಮ್ಮ ವೆಂಕಟಪ್ಪ ನಕ್ಕ (35), ಸಾಯಮ್ಮ ಭೀಮಶಪ್ಪ ಮಿನಾಸ ಪುರಂ (72) ಮೃತರು.
‘ಅಸ್ವಸ್ಥರನ್ನು ತೆಲಂಗಾಣದ ನಾರಾಯಣಪೇಟೆ ಆಸ್ಪತ್ರೆ, ಮೆಹಬೂಬ್ ನಗರದ ಆಸ್ಪತ್ರೆ ಮತ್ತು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸ ಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.
‘ಇಬ್ಬರು ಮಹಿಳೆಯರು ಸಾವಿಗೆ ಮತ್ತು ಜನರು ಅಸ್ವಸ್ಥಗೊಳ್ಳಲು ಕಲುಷಿತ ನೀರು ಕುಡಿದಿದ್ದೇ ಕಾರಣ ಎಂಬ ಶಂಕೆಯಿದೆ. ಗ್ರಾಮದ ಕರೆಮ್ಮ ದೇವಸ್ಥಾನ, ಚೌಡಕಟ್ಟಿ ಓಣಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಿಂದ ನೀರು ಕಲುಷಿತ ಆಗಿರಬಹುದು. ಗ್ರಾಮದ ನೀರಿನ ಟ್ಯಾಂಕ್, ಕೊಳವೆಬಾವಿಯ ನೀರಿನ ಗುಣಮಟ್ಟ ಪರಿಶೀಲಿಸಲು ಅದನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಗುರುರಾಜ ಹಿರೇಗೌಡರ್ ತಿಳಿಸಿದರು.