ಪಣಜಿ: ಮನೆಯವರಿಗೆ ತಿಳಿಸದೆ ಪ್ರೇಮಿಗಳ ದಿನ ಆಚರಿಸಲು ಗೋವಾಗೆ ತೆರಳಿದ್ದ ಪ್ರೇಮಿಗಳಿಬ್ಬರು ಸಮುದ್ರದಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಸೋಮವಾರ ಸಂಜೆ ಪಾಲೊಲೇಮ್ ಬೀಚ್ನಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ಸುಪ್ರಿಯಾ ದುಬೇ (26) ಮತ್ತು ವಿಭು ಶರ್ಮಾ (27) ಎಂದು ಗುರುತಿಸಲಾಗಿದೆ.
ಇಬ್ಬರು ಕೂಡ ಉತ್ತರ ಪ್ರದೇಶ ಮೂಲದವರು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಗೋವಾ ಪೊಲೀಸರು ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಸಿದರು. ಬಳಿಕ ಅವರನ್ನು ಸಮೀಪದ ಕೊಂಕಣ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಸ್ಥಳಾಂತರಿಸಲಾಗಿದೆ.
ಮೃತ ಸುಪ್ರಿಯಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ವಿಭು ದೆಹಲಿಯಲ್ಲಿ ವಾಸವಿದ್ದನು. ಇಬ್ಬರು ಕೂಡ ಸಂಬಂಧಿಕರು ಎಂದು ತಿಳಿದುಬಂದಿದೆ. ಇವರಿಬ್ಬರು ಗೋವಾಗೆ ಬಂದಿರುವುದು ಎರಡು ಕುಟುಂಬಗಳಿಗೆ ತಿಳಿಯದಿರುವ ಕಾರಣ ಸಾವಿನ ಬಗ್ಗೆ ಮಾಹಿತಿ ಆ ಕ್ಷಣಕ್ಕೆ ತಿಳಿಯಲಿಲ್ಲ. ಬಳಿಕ ಪೊಲೀಸರು ಇಬ್ಬರ ಮಾಹಿತಿ ಕಲೆಹಾಕಿ ಸಾವಿನ ಸುದ್ದಿಯನ್ನು ಮುಟ್ಟಿಸಿದ್ದಾರೆ.