ಎಂ.ಕೆ.ಹುಬ್ಬಳ್ಳಿ: ‘ಹಣ-ಆಸ್ತಿ ಎಷ್ಟಿದ್ದರೇನು. ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃಶಾಂತಿ ತುಂಬುತ್ತಿವೆ. ನಾಮ ಹಲವಾರೂ, ದೇವನೊಬ್ಬನೆ ಎಂಬ ತತ್ವದಡಿ ಮುನ್ನಡೆಯುತ್ತಿವೆ’ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಸ್ಥಳೀಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ನಡೆದ ಶಿವರಾತ್ರಿ ಕಾರ್ಯಕ್ರಮ ಹಾಗೂ ನೂತನ ಕಟ್ಟಡ ‘ಶಿವಶಕ್ತಿ’ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಮನುಷ್ಯನಲ್ಲಿ ಶಾಂತಿ-ಸಹನೆ ತುಂಬುವ ಮೂಲಕ ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತಿರುವ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು, ಮಾನವನನ್ನು ದೇವಮಾನವನನ್ನಾಗಿ ರೂಪಿಸುತ್ತಿವೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುತ್ನಾಳ ಕೇದಾರ ಪೀಠ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಂದ್ರಯ್ಯ ಹಿರೇಮಠ ಸ್ವಾಮಿಗಳು ಇದ್ದರು. ಬೆಳಗಾವಿ ಉಪವಲಯದ ರಾಜಯೋಗಿನಿ ಬ್ರಹ್ಮಾಕುಮಾರಿ ಅಂಬಿಕಾ ಅಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಅನಿಗೋಳದ ರಾಜಯೋಗಿನಿ ಬ್ರಹ್ಮಾಕುಮಾರಿ ವಿದ್ಯಾ ಅಕ್ಕನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಗದಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆಯೋಗದ ಅಧ್ಯಕ್ಷ ಡಿ.ವೈ.ಬಸ್ಸಾಪೂರ, ಸ್ಥಳೀಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಯೋತಿ ಅಕ್ಕನವರು, ರಾಜಯೋಗಿನಿ ಬ್ರಹ್ಮಾಕುಮಾರಿ ಶಿರಾ ತುಮಕೂರಿನ ರಾಜಯೋಗಿ ಡಾ. ಮಹೇಂದ್ರ, ರಾಜಸ್ಥಾನ ಅಬುಪರ್ವತದ ರಾಜಯೋಗಿ ಬಿ.ಕೆ.ನಾಗೇಶ, ಅಚ್ಯುತಭಾಯಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಸ್ಥಳೀಯ ಪಪಂ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ, ಸಿಡಿಪಿಐ ಕಮಲಾ ಬಸರಗಿ ಪಾಲ್ಗೊಂಡಿದ್ದರು. ಬಾಬು ಅಣ್ಣನವರು ಸ್ವಾಗತಿಸಿದರು.