ರಾಮದುರ್ಗ: ‘ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವು ಮುಂದಿನ ಬಾರಿ ಅಧಿಕಾರ ಹಿಡಿಯಲಿದೆ. ಸಮಗ್ರ ಕರ್ನಾಟಕದ ಪರಿಕಲ್ಪನೆಯಲ್ಲಿ ಅನುದಾನ ವಿಂಗಡನೆ ಮಾಡಲಿದೆ’ ಎಂದು ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ರಾಮದುರ್ಗ ರೆಡ್ಡಿ ಸಮಾಜದವರು ಹಮ್ಮಿಕೊಂಡಿದ್ದ ವೇಮನರ 611ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿ ಬಾರಿ ರಾಜ್ಯ ಬಜೆಟ್‌ನ ಶೇ 70ರಷ್ಟು ಬೆಂಗಳೂರಿಗೆ ಮಾತ್ರ ಬಳಕೆ ಆಗುತ್ತಿದೆ.
ಉಳಿದ 30ರಷ್ಟು ಮಾತ್ರ ಇಡೀ ಉತ್ತರ ಕರ್ನಾಟಕಕ್ಕೆ ಹಂಚುತ್ತಾರೆ. ಇದು ಸರಿಯಾದ ಕ್ರಮವಲ್ಲ. ಎಲ್ಲ ಜಿಲ್ಲೆಗಳಿಗೆ ಸರಿಯಾದ ಬಜೆಟ್ ವಿಂಗಡಣೆ ಆಗಬೇಕೆಂಬುದು ನಮ್ಮ ಪಕ್ಷದ ಉದ್ದೇಶ’ ಎಂದರು.
‘ಪ್ರಗತಿಯ ತಾರತಮ್ಯ ಖಂಡಿಸಿ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಹೋರಾಟ ಮಾಡಿದರೆ ಸಾಕು; ಚಿನ್ನದ ತಟ್ಟೆಯಲ್ಲಿಟ್ಟು ಈ ರಾಜ್ಯ ನಿಮ್ಮದು ಎಂದು ಕೊಟ್ಟುಬಿಡುವವರೂ ಇದ್ದಾರೆ. ಆದರೆ, ಹಾಗೆ ಮಾಡುವುದು ಸರಿಯಲ್ಲ. ನಾವು ಸಮಗ್ರ ಕರ್ನಾಟಕ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಹೋರಾಡಬೇಕು’ ಎಂದರು.
‘ಸಮಾಜದ ವೇದಿಕೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವು ಸಮಾಜ ಕಟ್ಟುವುದಕ್ಕೆ ಸೇರಿದಾಗ ಸಮಾಜದ ಕೆಲಸ ಮಾತ್ರ ಮಾಡೋಣ. ಸಮಾಜ ಸಂಘಟಿಸಿ ನಂತರ ಅಧಿಕಾರ ಹಿಡಿಯಲು ಒಂದಾಗೋಣ’ ಎಂದೂ ಅವರು ಹೇಳಿದರು.
ಸಾಹಿತಿ, ಕಲಬುರಗಿಯ ಮಹಿಪಾಲರೆಡ್ಡಿ ಉಪನ್ಯಾಸ ನೀಡಿ, ‘ಸಮಾಜ ಸಂಘಟನೆಯಿಂದ ಮಾತ್ರ ರೆಡ್ಡಿ ಸಮಾಜವು ರಾಜಕೀಯವಾಗಿ ಬೆಳೆಯಲು ಸಾಧ್ಯವಿದೆ’ ಎಂದು ಹೇಳಿದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ‘ಕೃಷಿ ಆಧರಿತ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ರೆಡ್ಡಿ ಸಮಾಜ ಕೃಷಿಯನ್ನು ಕಡೆಗಣಿಸಿದೆ. ಸಾಕಷ್ಟು ಪ್ರಾಬಲ್ಯ ಹೊಂದಿದ ಈ ಸಮಾಜ ಕೃಷಿಯತ್ತ ಮತ್ತೆ ವಾಲಬೇಕಿದೆ’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿದರು. ಗುರುದೇವ ಆತ್ಮಾನಂದ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ವಿ. ಪಾಟೀಲ ಸ್ವಾಗತಿಸಿದರು. ಎಂ.ಬಿ. ಗೊಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಅಣ್ಣಿಗೇರಿ ವಂದಿಸಿದರು.
ಮಾಜಿ ಶಾಸಕ ಆರ್.ವಿ. ಪಾಟೀಲ, ರಡ್ಡಿ ಸಮಾಜದ ಮುಖಂಡರಾದ ರಾಜೇಂದ್ರ ಪಾಟೀಲ, ಚನ್ನಬಸು ಹಿರೇರಡ್ಡಿ, ಗೀತಾ ಕೌಲಗಿ, ಡಾ.ಆರ್.ಎ. ಕಣಬೂರ ಮತ್ತು ಇತರರು ವೇದಿಕೆ ಮೇಲಿದ್ದರು. ಇದಕ್ಕೂ ಮೊದಲು ವೇಮನರ ಭಾವಚಿತ್ರವನ್ನು ಆಕರ್ಷಕ ಮೆರವಣಿಗೆಯಲ್ಲಿ ಕರೆತರಲಾಯಿತು.