ಬೆಂಗಳೂರು: ‘ವಿಧಾನಸೌಧದಲ್ಲಿ ಪೇಶ್ವೆ ವಂಶದ ನಾಯಕನ ಪ್ರತಿಷ್ಠಾಪನೆ ಮಾಡಲು ಹೊರಟಿರುವ ಬಿಜೆಪಿ ನನ್ನ ಪ್ರಶ್ನೆಗೆ ಉತ್ತರ ಕೊಡುವ ದಮ್ಮು, ತಾಕತ್ತು ತೋರಿಸುತ್ತಿಲ್ಲ ಏಕೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿ, ‘ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ್ದ ಪೇಶ್ವೆಗಳ ವಂಶದ ವ್ಯಕ್ತಿಯನ್ನು ಸಿ.ಎಂ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ ಎಂಬ ನನ್ನ ಹೇಳಿಕೆಯಲ್ಲಿ ಗೊಂದಲವಿಲ್ಲ, ಬ್ರಾಹ್ಮಣ ಸಮೂಹವನ್ನು ನಿಂದಿಸಿಲ್ಲ. ಗರ್ಭಗುಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಬಿಜೆಪಿಯವರಿಗೂ ಚೆನ್ನಾಗಿ ಗೊತ್ತು’ ಎಂದಿದ್ದಾರೆ. ‘ಹೇಳಿಕೆಯನ್ನು ಕೆಲವರು ತಿರುಚಿ ಅಪಪ್ರಚಾರ ನಡೆಸುತ್ತಿದ್ದಾರೆ. ಬಸವೇಶ್ವರರು, ಬುದ್ಧ,ಶಿವಾಜಿ, ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನೇ ಇವರು ಬಿಟ್ಟಿಲ್ಲ. ನನ್ನನ್ನು ಬಿಡುತ್ತಾರೆಯೇ?’ ಎಂದು ಹೇಳಿದ್ದಾರೆ.